ಚಾಮರಾಜನಗರ : ಕಾವೇರಿ ನದಿ ನೀರು ನಿರ್ವಾಹಣ ಮಂಡಲಿಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸುವಂತೆ ಆಗ್ರಹಿಸಿ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಿಂದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕಾವೇರಿ ನದಿ ನೀರು ನಿರ್ವಾಹಣಾ ಮಂಡಲಿಯ ವಿರುದ್ದ ಘೋಷಣೆ ಕೂಗುತ್ತಾ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಶ್ರೀ ಭುವನೇಶ್ವರಿ ವೃತ್ತದಲ್ಲಿ ತಮಿಳುನಾಡಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಲಾಯಿತು.
ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನದಿ ನೀರು ನಿರ್ವಹಾಣ ಸಮಿತಿ ರಚನೆಯಾದ ದಿನದಿಂದ ಇಲ್ಲಿಯ ತನಕ ತಮಿಳುನಾಡು ಪರವಾಗಿಯೇ ಆದೇಶಗಳನ್ನು ನೀಡಲಾಗುತ್ತಿದ್ದು, ತಮಿಳುನಾಡಿನ ಏಜೆಂಟರಂತೆ ವರ್ತನೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೂಡಲೇ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯನ್ನು ವಜಾಗೊಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು , ಹೋರಾಟಗಾರರಾದ ಚಾ.ವೆಂ.ರಾಜಗೋಪಾಲ, ಗು.ಪುರುಷೋತ್ತಮ, ಚಾ.ಹ. ರಾಮು, ದಲಿತ ಮುಖಂಡ ಆಲೂರು ನಾಗೇಂದ್ರ ಹಾಗೂ ಅನೇಕರು ಭಾಗವಹಿಸಿದ್ದರು.