ಚಾಮರಾಜನಗರ: ಸಾಲು ಸಾಲು ರಜೆ ಮುಗಿದ ಹಿನ್ನಲೆ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಹೆಚ್ಚಾದ ಪ್ರಯಾಣಿಕರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಿಗಧಿತ ಸಮಯಕ್ಕೆ ತೆರಳಲು ಬಸ್ ಸೌಲಭ್ಯ ಇಲ್ಲದೇ ಇರುವುದನ್ನು ಖಂಡಿಸಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟಿಸಿದ ಘಟನೆ ಜಿಲ್ಲೆಯ ಹನೂರಿನಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಹನೂರು ಬಸ್ ನಿಲ್ದಾಣದಲ್ಲಿ ವಿವಿಧ ಶಾಲೆ ಮತ್ತು ಕಾಲೇಜಿಗೆ ತೆರಳಲು ಬಂದ ವಿದ್ಯಾರ್ಥಿಗಳಿಗೆ ಸೂಕ್ತವಾದ ಬಸ್ ಇಲ್ಲದೇ ಇರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಹಠತ್ತಾಗಿ ಬಸ್ ತಡೆದು ಪ್ರತಿಭಟನೆಗೆ ಮುಂದಾದರು.
ಸ್ಥಳಕ್ಕೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಮ್ಯಾನೇಜರ್ ಮುತ್ತುರಾಜ್ ರವರನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು ಸೂಕ್ತವಾದ ಬಸ್ ಸೌಕರ್ಯ ಕಲ್ಪಿಸುವಂತೆ ಕಳೆದ ವಾರ ಜಿಲ್ಲೆಗೆ ಬೇಟಿ ನೀಡಿದ್ದ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಆದರೂ ವಿದ್ಯಾರ್ಥಿಗಳ ಶೈಕ್ಷಣಿಕತೆ ಅನುಕೂಲವಾಗುವಂತೆ ಬಸ್ ಸೌಕರ್ಯ ಇಲ್ಲದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು ವಿದ್ಯಾರ್ಥಿಗಳು.
ಸ್ಥಳಕ್ಕೆ ಆಗಮಿಸಿದ ಹನೂರು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಹರಸಾಹಸ ಪಟ್ಟರು. ಕೊನೆಗೂ ಡಿಪೋ ಮ್ಯಾನೇಜರ್ ಬರವಸೆಯಿಂದಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಬಂದ ಬಸ್ ನಲ್ಲಿ ಶಾಲಾ ಕಾಲೇಜಿಗೆ ತೆರಳಿದರು.