ಮೈಸೂರು : ರುದ್ರಾಕ್ಷಿ ಮಾಲೆಯಲ್ಲಿ ಇದ್ದಂತಹ ಚಿನ್ನವನ್ನು ಮಾರಾಟ ಮಾಡಿ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಗೂ ಅಕ್ಷರ ದಾಸೋಹ ಉಣಬಡಿಸಿದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಪ್ರತಿಯೊಬ್ಬರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಗರದ ಜೆಎಸ್‌ಎಸ್ 2ನೇ ಹಂತದಲ್ಲಿ ಗುರುವಾರ ನಡೆದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 108ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ನಮಗೆಲ್ಲರಿಗೂ ವಿದ್ಯೆ ನೀಡಬಾರದೆಂದು ನಿರ್ಧರಿಸಿದ್ದವರ ವಿರುದ್ಧ ನಿಂತ ಶ್ರೀಗಳು, ಸಮಾಜದ ಎಲ್ಲ ವರ್ಗದವರಿಗೂ ವಿದ್ಯಾದಾನ ಮಾಡಿದರು. ಉದಾತ್ತವಾದ ಮನಸ್ಸು ಹೊಂದಿದ್ದ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಅಂತಹ ಸಂತರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಬಸವಣ್ಣ ಅವರು ಬ್ರಾಹ್ಮಣ ಸಮುದಾಯದಲ್ಲಿ ಜನಸಿದ್ದರೂ, ದಯೆ ಇಲ್ಲದ ಧರ್ಮ ಯಾವುದೆಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಜಗತ್ತಿಗೆ ಸಾರಿದರು. ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯ ದೇಶವೇ ತಲೆತಗ್ಗಿಸುವಂಥ ವಿಚಾರ. ಇಂದು ಅನೇಕರು ಬಸವ ತತ್ವ ಹಾಗೂ ಸಂವಿಧಾನ ಓದಿದ್ದರೂ ಗಂಡು, ಹೆಣ್ಣು, ಮೇಲೂ, ಕೀಳು ಎಂಬ ತಾರತಮ್ಯದ ಜಂಜಾಟದಲ್ಲಿದ್ದಾರೆ. ಉತ್ತಮ ಸಮಾಜ ನಿರ್ಮಾಕ್ಕಾಗಿ ಮೊದಲು ಇಂತಹ ನಡವಳಿಕೆಯನ್ನು ಬಿಡಬೇಕು ಎಂದು ತಿಳಿಸಿದರು.
ಮಾನವತವಾದ ಹೊರತುಪಡಿಸಿ ನಾನು ಯಾವ ಧರ್ಮ, ಜಾತಿ ಸೇರಿದವರು ಎಂಬ ಕಲ್ಪನೆಯೇ ನನಗಿಲ್ಲ. ಬುದ್ದ, ಬಸವ ತತ್ವ ಹಾಗೂ ಸಂವಿಧಾನದ ಅಡಿಯಲ್ಲಿ ನಾನು ಬದುಕುತ್ತಿದ್ದೇನೆ. ಅಂತೆಯೇ ನಮ್ಮ ಮಕ್ಕಳನ್ನು ಜಾತಿ, ಮತ, ಪಂಥದಿಂದ ದೂರವಾಗಿಸಿ ವಿಶ್ವಮಾನವರಾಗಿ ಬದುಕುವಂತೆ ಬೆಳೆಸಬೇಕು ಎಂದರು.
ಸಮಾಜದ ಡೊಂಕನ್ನು ವಚನ ಮೂಲಕ ತಿದ್ದದ ಬಸವಣ್ಣ ಕಲ್ಯಾಣದಲ್ಲಿ ಕ್ರಾಂತಿ ಮಾಡಿದರು. ಜಾತಿ ವಿನಾಶವಾಗಬೇಕಾದರೆ ರಕ್ತ ಸಂಬಂಧಗಳು ಬೆಳೆಯಬೇಕು. ಆಗ ಹುಟ್ಟುವಂತ ಮಗು ಜಾತಿ, ಧರ್ಮಗಳನ್ನು ಮೀರಿ ಬೆಳೆಯಬೇಕು ಎಂಬುದು ಅವರ ಕನಸಾಗಿತ್ತು. ಬಸವಣ್ಣನ ಸಾಮೂಹಿಕ ವಿವಾಹದ ಪರಿಕಲ್ಪನೆಯನ್ನು ಇಂದು ಸುತ್ತೂರು ಮಠ ಪಾಲಿಸುತ್ತಿದೆ ಎಂದು ಹೇಳಿದರು.
ಬಸವಧರ್ಮದಲ್ಲಿ ತಾರತಮ್ಯಕ್ಕೆ ಅವಕಾಶವೇ ಇಲ್ಲ. ಇಂದಿಗೂ ವೀರಶೈವ ಧರ್ಮದಲ್ಲಿ ಮಹಿಳೆಯರಿಗೆ ಮುಕ್ತವಾದ ಸ್ವಾತಂತ್ರ್ಯವಿದೆ. ವಿಶೇಷವಾದ ಸ್ಥಾನಮಾನಗಳಿಗೆ. ಅವರು ಬಹಳ ಮಾನವೀಯತೆಯಿಂದ ವರ್ತಿಸುತ್ತಾರೆ. ಇದು ಬಸವಣ್ಣ ಸಾಹಿತ್ಯ ಚಳುವಳಿ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಹಾಕಿಕೊಟ್ಟ ಮಾರ್ಗದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ ಸ್ಥಾನಮಾನಕ್ಕಾಗಿ ತಮ್ಮ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಿಳೆಯರು ಗಂಡಸರ ನಡುವೆ ಸಮಾನದಿಂದ ಬದುಕಬೇಕು ಎಂಬ ಉದ್ದೇಶಕ್ಕಾಗಿ ಅಹರ್ನಿಶಿ ದುಡಿದರು. ಅವರು ಹಾಕಿದ ಮಹಿಳಾ ಸಮಾನತೆಯ ಬುನಾದಿಯಿಂದಲೇ ಇಂದು ಮಹಿಳೆಯರಿಗೆ ರಾಜಕೀಯವಾಗಿಯೂ ಮೀಸಲಾತಿ ಬರುವಂತಾಗಿದೆ ಎಂದು ಹೇಳಿದರು.
ಕಳೆದ ಭಾರಿ ನಮ್ಮ ಸರ್ಕಾರ ಜಾರಿಗೆ ಬಂದ ಕೂಡಲೇ ಅನ್ನಭಾಗ್ಯದ ಕಡತಕ್ಕೆ ಸಿದ್ದರಾಮಯ್ಯ ಅವರು ಮೊದಲು ಸಹಿ ಹಾಕಿದರು. ಈ ಯೋಜನೆ ಬಗ್ಗೆ ಕೆಲವರು ಅಪಹಾಸ್ಯ ಮಾಡಿದರು. ಆದರೆ ಯೋಜನೆಯ ಮಹತ್ವ ತಿಳಿದಿದ್ದು ಕೋವಿಡ್ ಸಂದರ್ಭದಲ್ಲಿ. ಆ ವೇಳೆ ಎಲ್ಲಾ ವಿವಿಧ ಸಮುದಾಯಕ್ಕೆ ಸೇರಿದ ಮಹಿಳೆಯರು ಸಿದ್ದರಾಮಯ್ಯ ನೇತೃತ್ವರ ಸರ್ಕಾರವನ್ನು ಕೊಂಡಾಡಿದರು ಎಂದು ಮೆಲಕು ಹಾಕಿದರು.
ಬಡ, ಮಧ್ಯಮ ವರ್ಗದ ಬಡ ಸ್ತ್ರೀ ಸ್ವಾವಲಂಬಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಈ ಪರಿಕಲ್ಪನೆ ಅಡಿಯಲ್ಲಿ ಈಗಿನ ನಮ್ಮ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿದೆ. ನಮ್ಮ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳು ಮಹಿಳೆಯರ ಪರವಾಗಿದೆ ಎಂದು ತಿಳಿಸಿದರು.
ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಸಮಾಜದ ಎಲ್ಲಾ ಜನರ ಬಗ್ಗೆ ಕಳಕಳಿ ಇಟ್ಟುಕೊಂಡಿದ್ದರು. ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ, ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡಿದ್ದಾರೆ. ಈ ಭಾಗವೂ ಕೂಡ ವರುಣ ಕ್ಷೇತ್ರಕ್ಕೆ ಸೇರಲಿದ್ದು, ಇಲ್ಲಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಅಭಿವೃದ್ಧಿ ಕೆಲಸವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾಶಾಲೆಯ ಸಂಚಾಲಕರಾದ ಸ್ವಾಮಿ ಯುಕ್ತಾಕೇಶನಂದಾಜಿ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ವಿ.ವಸಂತಕುಮಾರ್, ಸಂಘದ ಅಧ್ಯಕ್ಷ ಎಂ.ಎಸ್.ಸರ್ಪಭೂಷಣ್, ಉಪಾಧ್ಯಕ್ಷ ಡಿ.ಎಸ್.ಮಹೇಶ್, ನಿರ್ದೇಶಕರಾದ ಗಂಗಾಧರಪ್ಪ, ಡಾ.ಪ್ರಭು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.