ಚಾಮರಾಜನಗರ : ಕಾವೇರಿ ನದಿ ನೀರು ಹಂಚಿಕೆ ನಿಯಂತ್ರಣ ಪ್ರಾಧಿಕಾರ ನೀಡಿರುವ ಆದೇಶವನ್ನು ಸುಪ್ರಿಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಮುಖ್ಯಮಂತ್ರಿಗಳು ಚಿಂತನೆ ಮಾಡುವ ಬದಲು ತಮಿಳುನಾಡಿಗೆ ಹರಿಯುವ ಕಾವೇರಿ ನೀರನ್ನು ನಿಲ್ಲಿಸುವಂತೆ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆ ಮತ್ತು ರೈತರು ಆಗ್ರಹಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಕನ್ನಡ ಪರ ಸಂಘಟನೆಯ ಮುಖಂಡ ಚಾ.ರಂ. ಶ್ರೀನಿವಾಸಗೌಡ, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಯಲು ಬಿಟ್ಟು, ಈಗ ಸುಪ್ರಿಂ ಕೋರ್ಟ್ ನಲ್ಲಿ ಚಾಲೆಂಜ್ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ಸರಿಯಲ್ಲ ಹಾಗೂ ಸರ್ಕಾರ ಹೋದರೂ ಚಿಂತಿಸಬೇಡಿ ಮುಖ್ಯಮಂತ್ರಿಗಳೇ, ರಾಜ್ಯದ ಜೀವನಾಡಿಯಾಗಿರುವ ಕಾವೇರಿ ನದಿ ನೀರಿನ ವಿಷಯದಲ್ಲಿ ಅಚಲ ನಿರ್ಧಾರ ಕೈಗೊಂಡು, ತಮಿಳುನಾಡಿಗೆ ಹರಿಯುವ ನೀರು ನಿಲ್ಲಿಸಿ ಆಗ ರಾಜ್ಯದ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲುವರು ಎಂದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯ ಸರ್ಕಾರವು ತಮಿಳುನಾಡಿನ ಏಜೆಂಟರಂತೆ ವರ್ತಿಸುವ ಬದಲು ನಮ್ಮ ನೆಲ ಜಲ ಉಳಿವಿಗೆ ಮುಂದಾಗಲಿ ಎಂದರು.