ಮೈಸೂರು : ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಲಂಚಾವತಾರ ಬಗೆದಷ್ಟು ಬಯಲಿಗೆ ಬಂದಿದೆ.
ಹಣ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ಪ್ರಾಧ್ಯಾಪಕರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಎಲ್ಲೆಡೆ ಆಗುತ್ತಿದೆ.
ಎಂಎಸ್ಸಿ ಪ್ರಶ್ನೆ ಪತ್ರಿಕೆಗೆ 1500 ರೂ., ಎಂಎ ಮತ್ತು ಎಂಕಾಮ್ ಪ್ರಶ್ನೆ ಪತ್ರಿಕೆಗೆ 1 ಸಾವಿರ ರೂಪಾಯಿ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಹಣ ಕೊಡದ ವಿದ್ಯಾರ್ಥಿಗಳನ್ನು ಬೇರೆ ಪರೀಕ್ಷಾ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸುತ್ತಾರೆ. ಈ ಸಂಬಂಧ ವಿವಿ ಪ್ರಾಧ್ಯಾಪಕರ ಜೊತೆ ವಿದ್ಯಾರ್ಥಿಯೊಬ್ಬ ಮಾತನಾಡಿರುವ ಆಡಿಯೋ ವೈರಲ್ ಆಗುವ ಮೂಲಕ ವಿವಿಯ ಲಂಚಾವತಾರ ಬಯಲಿಗೆ ಬಂದಿದೆ.
ಆಡಿಯೋದಲ್ಲಿ ಇರುವಂತೆ, ಚಿತ್ರದುರ್ಗ ಪರೀಕ್ಷಾ ಕೇಂದ್ರದಲ್ಲಿ ಒಂದು ಸೆಮಿಸ್ಟರ್ಗೆ ಮೂರು ಸಾವಿರ ರೂಪಾಯಿ ಲಂಚ ಪಡೆದು ಕಾಪಿ ಹೊಡೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಹಣ ಕೊಡದ ವಿದ್ಯಾರ್ಥಿಗಳನ್ನು ಪ್ರತ್ಯೇಕ ರೂಮ್ನಲ್ಲಿ ಕೂರಿಸಿ ಪರೀಕ್ಷೆ ಬರೆಸುವ ಮೂಲಕ ಟಾರ್ಗೆಟ್ ಮಾಡಲಾಗುತ್ತದೆ.
ಚಿತ್ರದುರ್ಗ ಕೇಂದ್ರ ಬೇಡ ಎಂದು ದಾವಣಗೆರೆ ಪರೀಕ್ಷಾ ಕೇಂದ್ರ ತೆಗೆದುಕೊಂಡೆ. ಆದರೆ, ಚಿತ್ರದುರ್ಗಕ್ಕಿಂತ ಹೆಚ್ಚು ಲಂಚಾವತಾರ ಇಲ್ಲಿದೆ. ಚಿತ್ರದುರ್ಗದಲ್ಲಿ ಒಂದು ಸೆಮೆಸ್ಟರ್ಗೆ 1 ಸಾವಿರ ಕೇಳಿದರೆ, ದಾವಣಗೆರೆಯಲ್ಲಿ ಒಂದು ವಿಷಯಕ್ಕೆ 1 ಸಾವಿರ ಕೇಳಿದ್ದಾರೆ ಎಂದು ಆಡಿಯೋದಲ್ಲಿ ಕೇಳಿ ಬಂದಿದೆ
ದಾವಣಗೆರೆ ರೀಜನಲ್ ಸೆಂಟರ್ನ ಕೊಠಡಿಯೊಂದರಲ್ಲಿ 36 ಮಂದಿ ಇದ್ದರು. ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಾಗಿತ್ತು. ನೋಂದಣಿ ಸಂಖ್ಯೆ ಏನೂ ಇಲ್ಲ. ಇದನ್ನು ಪರೀಕ್ಷಾ ಸಂಯೋಜಕರಲ್ಲಿ ಪ್ರಶ್ನಿಸಿದಾಗ, ಬೆಳಗ್ಗೆಯಿಂದ ನಾನು ತಿಂಡಿ ತಿಂದಿಲ್ಲ, ಅದನ್ನು ವಿಚಾರ ಮಾಡುತ್ತಿದ್ದೇನೆ ಎಂದು ಹೇಳಿದ್ದಾಗಿ ವಿದ್ಯಾರ್ಥಿ ಹೇಳುವುದನ್ನು ಆಡಿಯೋದಲ್ಲಿ ಕೇಳಬಹುದು
ಒಟ್ಟಾರೆಯಾಗಿ ದಿನೇ ದಿನೇ ಮುಕ್ತ ವಿವಿಯ ಅಕ್ರಮಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು ಈ ಬಗ್ಗೆ ವಿವಿಯ ವಿಸಿ ತುಟಿ ಬಿಚ್ಚದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಇನ್ನೂ ಕ್ರಮ ತೆಗೆದುಕೊಳ್ಳುತ್ತಾ ಕಾದು ನೋಡಬೇಕಿದೆ