ಬಾಗಲಕೋಟೆ: ಕಾಂಗ್ರೆಸ್ ಸರ್ಕಾರವೂ ಬಂದಾಯಿತು. ಸಿದ್ದರಾಮಯ್ಯ ಸಿಎಂ ಆಗಿದ್ದೂ ಆಯ್ತು. ಆದ್ರೆ ಚುನಾವಣೆ ಮೊದಲು ಕೊಟ್ಟ ಮಾತು ತಪ್ಪಿದ್ದಾರೆ ಎಂಬ ಅಭಿಪ್ರಾಯ ಬಾದಾಮಿ ಜನರಲ್ಲಿ ವ್ಯಕ್ತವಾಗುತ್ತಿದೆ.
ಈ ಹಿಂದೆ ಬಾದಾಮಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಬಿಟ್ಟು ವರುಣಾದಲ್ಲಿ ನಿಂತಿದ್ದರು. ಚುನಾವಣಾ ಸಮಯದಲ್ಲಿ ಬಾದಾಮಿಯಿಂದಲೇ ಸ್ಪರ್ಧಿಸಿ ಎಂದು ಬೆಂಬಲಿಗರ ಒತ್ತಾಯ ಮಾಡಿದಾಗ ಮನವೊಲಿಸಲು ಬಾದಾಮಿ ಕ್ಷೇತ್ರವನ್ನು ದತ್ತು ಪಡೆದು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು.
ಅಧಿಕಾರಕ್ಕೆ ಬಂದು ನೂರು ದಿನಗಳು ದಾಟಿದರೂ ಬಾದಾಮಿ ಅಭಿವೃದ್ಧಿ ಬಗ್ಗೆ ಸಿಎಂ ಮಾತನಾಡುತ್ತಿಲ್ಲ. ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಹಳೆ ಕ್ಷೇತ್ರವನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ
ಬೆಟ್ಟದಷ್ಟು ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರದ ಜನರಿಗೆ ಹೊಸ ಸರ್ಕಾರ ಬಂದ ಮೇಲೆ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ಭಾವನೆಯಲ್ಲಿದ್ದರು. ಆದರೆ ಸರ್ಕಾರ ಬಂದು ಇಷ್ಟು ದಿನಗಳಾದರೂ ಬಾದಾಮಿ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ. ಬಾದಾಮಿ ಪಟ್ಟಣದಲ್ಲಿ ಸುಸಜ್ಜಿತ ರಸ್ತೆ, ಮಾರುಕಟ್ಟೆ ಇಲ್ಲದೇ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರವಾಸಿ ತಾಣಗಳ ಬಳಿ ಮೂಲಭೂತ ಸೌಕರ್ಯದ ಕೊರತೆ ಬಹಳಷ್ಟಿದೆ. ನೀರಾವರಿ ಯೋಜನೆಗಳು ಕುಂಠಿತವಾಗಿವೆ. ಇಷ್ಟೆಲ್ಲ ಸಮಸ್ಯೆ ಇರುವುದನ್ನು ಅರಿತ ಸಿದ್ದರಾಮಯ್ಯ ಒಮ್ಮೆಯೂ ತಮಗೆ ಪುನರ್ಜನ್ಮ ನೀಡಿದ ಕ್ಷೇತ್ರದ ಬಗ್ಗೆ ಚಿಂತಿಸುತ್ತಿಲ್ಲ ಎಂದು ಕ್ಷೇತ್ರದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ