ಬೆಂಗಳೂರು : ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರಕ್ಕೆ ದಿನೇ ದಿನೇ ಹೋರಾಟ ಹೆಚ್ಚಾಗುತ್ತಿರುವ ಕುರಿತು ಚನ್ನಪಟ್ಟಣದ ವಂದಾರಗುಪ್ಪೆ ಗ್ರಾಮದಲ್ಲಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರದ ಮೆಡಿಕಲ್ ಕಾಲೇಜು ಎಲ್ಲೂ ಹೋಗಲ್ಲ. ರಾಜಕೀಯ ಉದ್ದೇಶದಿಂದ ಬಂದ್ ಮಾಡುವವರಿಗೆ ನಮ್ಮದೇನು ತಕರಾರಿಲ್ಲ. ಜಿಲ್ಲೆಯ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಯಾರು ಗೊಂದಲ ಹುಟ್ಟುಹಾಕುತ್ತಿದ್ದಾರೋ ಗೊತ್ತಿಲ್ಲ. ಕನಕಪುರದ ಮೆಡಿಕಲ್ ಕಾಲೇಜು ಕನಕಪುರದಲ್ಲೇ ಆಗುತ್ತದೆ. ರಾಮನಗರದ ಮೆಡಿಕಲ್ ಕಾಲೇಜು ರಾಮನಗರದಲ್ಲೇ ಆಗುತ್ತದೆ. ಐದು ವರ್ಷದಲ್ಲಿ ನಮ್ಮ ಕೆಲಸ ಪೂರ್ಣ ಮಾಡುತ್ತೇವೆ. ರಾಜಕೀಯಕ್ಕಾಗಿ ಗೊಂದಲ ಮಾಡುವವರು ಮಾಡಲಿ. 20 ವರ್ಷದಿಂದ ಮಲಗಿದ್ದವರು ಈಗ ಎದ್ದಿದ್ದಾರೆ. ಅವರ ಪಾಡಿಗೆ ಅವರು ಆರೋಪ ಮಾಡಲಿ ಎಂದು ಪರೋಕ್ಷವಾಗಿ ಜೆಡಿಎಸ್‌ಗೆ ಟಾಂಗ್ ನೀಡಿದರು.
ದಿನೇ ದಿನೇ ಕಾವೇರಿ ಹೋರಾಟ ಹೆಚ್ಚಾಗುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ರೈತರಿಗೆ ನೀರು ಉಳಿಸಬೇಕು. ರಾಜ್ಯದ ಹಿತ ಕಾಯಬೇಕೆಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಾನು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದಷ್ಟು ಬೇಗ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮನವಿ ಮಾಡಿ ರಾಜ್ಯದ ವಸ್ತುಸ್ಥಿತಿಯನ್ನು ಕೋರ್ಟ್‌ಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬರಪೀಡಿತ ಪ್ರದೇಶ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಿಲ್ಲ. 46% ರಷ್ಟು ಮಳೆ ಕಡಿಮೆ ಆಗಿದೆ. ರಾಮನಗರದಲ್ಲೂ ಮಳೆ ಇಲ್ಲದೆ ಬಿತ್ತನೆ ಕಾರ್ಯ ನಡೆದಿಲ್ಲ. ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ ಎಂದರು
ಬಿಎಲ್ ಸಂತೋಷ್ ಸಂಪರ್ಕದಲ್ಲಿ ಕಾಂಗ್ರೆಸ್‌ನ 45 ಶಾಸಕರಿದ್ದಾರೆ ಎಂಬ ವಿಚಾರದ ಕುರಿತು, ಅವರ ಹೇಳಿಕೆಯನ್ನು ಉಲ್ಟಾ ಮಾಡಿಕೊಳ್ಳಿ ಎಂದಿದ್ದಾರೆ. ಬಿಜೆಪಿಯವರೇ 45 ಜನ ನಮ್ಮ ಹತ್ತಿರ ಬರುತ್ತಾರೆ ಅಂದುಕೊಳ್ಳಿ ಎಂದು ಪರೋಕ್ಷವಾಗಿ ಆಪರೇಷನ್ ಹಸ್ತದ ಬಗ್ಗೆ ಸುಳಿವು ನೀಡಿದ್ದಾರೆ