ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವ ಗಜಪಡೆಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಸಂಪ್ರದಾಯಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರುವ ಮೂಲಕ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಗಜಪಯಣಕ್ಕೆ ಶುಕ್ರವಾರ ಚಾಲನೆ ನೀಡಿದರು.
ಸಾಂಸ್ಕತಿಕ ಕಲಾತಂಡಗಳು, ವೀರಗಾಸೆ, ಮಂಗಳವಾದ್ಯ, ತಮಟೆ, ಚಂಡೆಯ ನಾದದ ಜೊತೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಬೆಳಗ್ಗೆ 9:56 ಗಂಟೆಗೆ ತುಲಾ ಲಗ್ನದಲ್ಲಿ ಪೂಜೆ ಕಾರ್ಯ ನೆರವೇರಿತು. ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ವರಲಕ್ಷ್ಮೀ, ವಿಜಯ, ಧನಂಜಯ, ಗೋಪಿ, ಭೀಮ, ಮಹೇಂದ್ರ, ಕಂಜನ್ ಹಾಗೂ ಹಿರಿಯ ಆನೆ ಅರ್ಜುನ ತಂಡವು ಕಬ್ಬು, ಬೆಲ್ಲ ಸೇವಿಸಿ ವಿಜೃಂಭಣೆಯಿಂದ ಕಾಡಿನಿಂದ ನಾಡಿನತ್ತ ಹೆಜ್ಜೆಹಾಕಿದವು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನಾಡಹಬ್ಬ ದಸರಾ ಅಂಗವಾಗಿ ಆನೆಗಳನ್ನು ಮೈಸೂರಿಗೆ ಕರೆತರುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ದಸರಾ ಉತ್ಸವವು ಹಾಡುವುದಕ್ಕೆ, ಕುಣಿಯುದಕ್ಕೆ ಸೀಮಿತವಲ್ಲ. ದೇಶದ ಜನರ ಬದುಕು, ಆಡಳಿತ, ವೈವಿಧ್ಯ ಹಾಗೂ ಸಮಾನತೆ ನಿರೂಪಣೆ ಮಾಡುವ ಮಹಾನ್ ಪ್ರದರ್ಶನ. ಈ ಕಾರಣಕ್ಕೆ ದಸರಾ ಉತ್ಸವ ವಿಶ್ವಖ್ಯಾತಿ ಪಡೆದಿದೆ ಎಂದು ಹೇಳಿದರು.
ಯಾವ ವಲಯವನ್ನೂ ಕಡೆಗಣಿಸದೆ ತನ್ನ ಆಡಳಿತದಲ್ಲಿ ಸಾಮ್ರಾಜ್ಯದ ಪ್ರಜೆಗಳ ರಕ್ಷಣೆ, ಸಂಪನ್ಮೂಲ ಕ್ರೋಢೀಕರಣೆ ಮತ್ತು ಸಮಾನ ವಿತರಣೆ ಮಾಡಿದ್ದಂತಹ ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ವಿವಿಧ ಆಚಾರ, ವಿಚಾರ ವೈವಿಧ್ಯತೆಯಲ್ಲಿ ಏಕತೆ ಕಾಣುವ ಭಾರತ ಸಂಸ್ಕೃತಿಯ ಪ್ರತೀಕ ದಸರಾವಾಗಿದೆ. ರಾಜರ ಕಾಲ ಕೊನೆಗೊಂಡ ಬಳಿಕ ಸರ್ಕಾರವೇ ಈ ಸಾಂಪ್ರದಾಯಿಕ ಆಚರಣೆಯನ್ನು ಮುನ್ನಡೆಸುತ್ತಾ ಬರುತ್ತಿದೆ ಎಂದರು.
ಪ್ರಜಾಪ್ರಭುತ್ವ ಜಾರಿಯಾದ ಬಳಿಕ ಜನರು ಮತ್ತು ಜನನಾಯಕರ ನಡುವೆ ನಂಬಕೆ, ಭರವಸೆ, ಜನಪರವಾದ ನಿಲುವುಗಳು, ಸಂವಿಧಾನದ ಆಶಯಕ್ಕೆ ಪೂರಕವಾದ ಆಡಳಿತಾತ್ಮಕ ನಿರ್ಧಾರಗಳು, ನಮ್ಮ ದೆಶದ ಅಭಿವೃದ್ಧಿಯನ್ನು, ಸೌಹಾರ್ದತೆಯನ್ನು, ಕ್ರೋಡೀಕರಿಸಿ ಉತ್ತಮ ರಾಷ್ಟ್ರವಾಗಿ ನಿರ್ಮಾಣ ಮಾಡಲು ಇದು ದೊಡ್ಡ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಜನರು ತಾವು ನಂಬಿದ ಧರ್ಮದಲ್ಲಿ ಆಚರಣೆ, ವಿಚಾರದ ಜೊತೆಗೆ ಬದುಕುವುದಕ್ಕೆ ಅವಕಾಶ ನೀಡಿರುವ ಸಂವಿಧಾನ ಆಶಯಕ್ಕೆ ಅನುಗುಣವಾಗಿ ನಾಡಿನ ಜನರು ನಾಡದೇವತೆ ಚಾಮುಂಡೇಶ್ವರಿಯನ್ನು ಅರಸರ ಬದಲಾಗಿ ಆನೆಯ ಮೇಲೆ ಅಂಲಂಕರಿಸಿ ಚಿನ್ನದ ಅಂಬಾರಿಯಲ್ಲಿ ಪ್ರದಕ್ಷಿಣೆ ಮಾಡುವ ಮುಖೇನ ನಾವೆಲ್ಲರೂ ಭಾರತೀಯರು, ಕನ್ನಡಿಗರು ಎಂಬುದನ್ನು ಎಲ್ಲಾ ರಾಜ್ಯ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಸಾರಬೇಕಿದೆ ಎಂದು ಹೇಳಿದರು.
ಬಹುಮುಖ ಪ್ರತಿಭೆಯ ತವರೂರಾದ ಮೈಸೂರಲ್ಲಿ ಎಲ್ಲರೂ ಸೇರಿ ಇಲ್ಲಿನ ಸಾಂಸ್ಕೃತಿಕ ಬದುಕನ್ನು, ಜನ ಜೀವನವನ್ನು, ಚಾರಿತ್ರಿಕ ಹಿನ್ನೆಲೆಯ ಜೊತೆಗೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ, ಶ್ರೇಷ್ಠತೆ, ಪ್ರೌಢಿಮೆಯನ್ನು ದೇಶದ ಉದ್ದಗಲಕ್ಕೆ ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ಮಾಡಲು ಇರುವಂಥ ದೊಡ್ಡ ಅವಕಾಶ ನಾಡಹಬ್ಬ ದಸರಾವಾಗಿದೆ ಎಂದು ತಿಳಿಸಿದರು.
ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆಗಾರಿಕೆ
ನಾವೆಲ್ಲರೂ ಕಾಡನ್ನು ರಕ್ಷಣೆ ಮಾಡಿದರೆ, ಕಾಡು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾಡಿನ ಉಳಿವು, ಮನುಷ್ಯನ ಉಳಿವು. ಕಾಡು ನಾಶವಾದರೆ ಮನುಷ್ಯ ನಾಶವಾಗುತ್ತಾನೆ. ವನ್ಯಸಂಪತ್ತು ದೇಶದ ಸಂಪತ್ತು. ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ರಷ್ಟು ಅರಣ್ಯ ಪ್ರದೇಶವಿರಬೇಕಿತ್ತು. ಆದರೆ ನಮ್ಮಲ್ಲಿ ಶೇ.21 ರಷ್ಟು ಮಾತ್ರ ಅರಣ್ಯವಿದೆ. ಪ್ರಕೃತಿಯ ಸಂಪತ್ತಿನ ಸಮತೋಲನ ಕಾಪಾಡಲು ಕಾಡಿನ ರಕ್ಷಣೆ, ಅಭಿವೃದ್ಧಿ, ವಿಸ್ತರಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆಗಾರಿಕೆ. ಇದೆಲ್ಲವನ್ನೂ ಗಮನದಲ್ಲಿಟ್ಟು ದಸರಾ ಉತ್ಸವದಲ್ಲಿ ದೇಶವನ್ನು ಸಮೃದ್ಧ ನಾಡನ್ನಾಗಿ ಕಟ್ಟುವ ಶಪಥ ಮಾಡೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ದಸರಾ- 2023 ಆನೆಗಳ ಪಟ್ಟಿ ಮತ್ತು ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಮಾತನಾಡಿದರು. ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ನಗರ ಪಾಲಿಕೆ ಮೇಯರ್ ಶಿವಕುಮಾರ್, ದೊಡ್ಡಹೆಜ್ಜೂರು ಗ್ರಾ.ಪಂ. ಅಧ್ಯಕ್ಷರಾದ ಅಂಬಿಕ ಲೋಕೇಶ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೂತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.