ಮೈಸೂರು : ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಗರದ ದೇವರಾಜ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾರಿನಿಂದ ಅಪಘಾತಕ್ಕೊಳಗಾಗಿ ಗಾಯಗೊಂಡು ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತಿರುವ ಪೌರಕಾರ್ಮಿಕ ಮಹದೇವ ಅವರನ್ನು ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಕರ್ತವ್ಯದ ವೇಳೆ ಅಪಘಾತಕ್ಕೀಡಾದ ಮಹದೇವ ಅವರ ಆರೊಗ್ಯ ಕುರಿತು ವೈದ್ಯರ ಜೊತೆ ಮಾತಾನಾಡಿದ್ದೇನೆ. ಸದ್ಯದಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತೀವ್ರ ಗಾಯಗೊಂಡಿರುವ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ಮಹದೇವ ಅವರು ಚಿಕ್ಕ ವಯಸ್ಸಿನಲ್ಲೆ ಈ ರೀತಿ ಗಾಯಗೊಂಡಿರುವುದು ನೋವಿನ ಸಂಗತಿ. ಅವರ ಕುಟುಂಬಕ್ಕೆ ಅವರೇ ಆಧಾರ ಸ್ತಂಭವಾಗಿದ್ದರು. ಹೀಗಾಗಿ ಅವರ ಜೀವನೋಪಾಕ್ಕಾಗಿ ಅಗತ್ಯ ಆರ್ಥಿಕ ನೆರವು ನೀಡಲಾಗುದು. ಈ ಸಂಬಂಧ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ಕುಟುಂಬದವರ ಜೀವನ ನಿರ್ವಹಣೆಗಾಗಿ ಅವರ ಪತ್ನಿಗೆ ಉದ್ಯೋಗ ನೀಡುವುದರ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅವರಿಗೆ ಅಗತ್ಯ ನೆರವು ನೀಡಲಾಗುದು ಎಂದು ಭರವಸೆ ನೀಡಿದರು.