ಮಂಡ್ಯ : ಕರ್ನಾಟಕ ಕಾಂಗ್ರೆಸ್ ಐಎನ್‌ಡಿಐಎ ಮೈತ್ರಿಗಾಗಿ ನೀರು ಬಿಟ್ಟಿದೆ. ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪವಾಗುತ್ತಿದ್ದು, ತಮಿಳುನಾಡಿಗೆ ವರವಾಗುತ್ತಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ ಎಂದು ಮಾಜಿ ಸಚಿವ ಸಿಟಿ ರವಿ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಉಳಿಯೋಕು ಆಗಲ್ಲ ಎಂದಿದ್ದಾರೆ.
ಕಾವೇರಿ ವಿವಾದ ಇವತ್ತು ನಿನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸ ಇದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರು, ಡಿಕೆಶಿ ಸೇರಿ ಎಲ್ಲರೂ ಪಾದಯಾತ್ರೆ ಮಾಡಿದ್ರು. ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದ್ರು. ರೈತರು ಎಂದರೆ ಎಲ್ಲರೂ ಒಂದೇ. ಕರ್ನಾಟಕ-ತಮಿಳುನಾಡು ಎನ್ನುವ ಬೇಧಭಾವ ಇಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರದಲ್ಲಿ ವ್ಯವಹಾರ ಮಾಡಬೇಕು. ಈಗ ಮಳೆ ಇಲ್ಲ, ಸಂಕಷ್ಟ ಇದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಅಳುವುದಕ್ಕೂ ಮೊದಲೇ ನೀರು ಕೊಟ್ಟಿದ್ದೀರಿ. ಮಕ್ಕಳು ಅತ್ತಾಗ ಮಾತ್ರ ತಾಯಿ ಹಾಲು ಕೊಡೋದು. ಆದರೆ ತಮಿಳುನಾಡು ಕೇಳೋದಕ್ಕೂ ಮೊದಲೇ ನೀರು ಬಿಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಐಎನ್‌ಡಿಐಎ ಮೈತ್ರಿಗೋಸ್ಕರ ನೀರು ಬಿಡುತ್ತಿದೆ. ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪವಾಗಿದ್ದು ತಮಿಳುನಾಡಿಗೆ ವರವಾಗುತ್ತಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿದ್ದೀರಿ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡುತ್ತಿದ್ದೀರಿ. ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದೀರಿ. ನಿಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು. ಹೇಗೂ ಒಂದಷ್ಟು ಜನ ಹೊಗಳು ಭಟ್ಟರನ್ನು ಇಟ್ಟುಕೊಂಡಿದ್ದೀರಿ. ಅವರ ಬಳಿ ಸೀಲ್ ಹಾಕೊಸಿಕೊಳ್ಳೊಕೆ ಸಭೆ ಮಾಡುತ್ತಿದ್ದೀರಿ. ತಮಿಳುನಾಡಿಗೆ ಮೊದಲೇ ನೀರು ಬಿಟ್ಟು ಈಗ ಸಭೆ ಮಾಡಿದರೆ ಏನು ಪ್ರಯೋಜನ? ನೀರು ಬಿಡುವ ಮೊದಲೇ ಸಭೆ ಮಾಡಬೇಕಿತ್ತು. ಇದು ಕಾಂಗ್ರೆಸ್ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಂದರು