ಮೈಸೂರು : 80 ಎಕರೆ ವಿಸ್ತೀರ್ಣ ಹೊಂದಿರುವ ಮೈಸೂರು ವಸ್ತು ಪ್ರದರ್ಶನ ಆವರಣವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಈ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೂವರು ಅಧಿಕಾರಿಗಳನ್ನೊಳಗೊಂಡ ತಂಡ ರಚನೆ ಮಾಡಲಾಗಿದೆ.
ಈ ತಂಡ ಅಧ್ಯಯನ ಮಾಡಿ ವರದಿ ನೀಡಲಿದೆ.
ಮುಂದಿನ ಹದಿನೈದು ದಿನಗಳಲ್ಲಿ ವರದಿ ನೀಡಲಿದೆ.
ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 10 ವರ್ಷಗಳ ಬಳಿಕ ಇಂದು ಮೈಸೂರು ಅರಮನೆಯ ಟ್ರಜರಿ ತೆರೆದು ಪರಿಶೀಲನೆ ನಡೆಸಲಾಗಿದೆ.
2014ರಿಂದಲೂ ಅದನ್ನು ಮುಚ್ಚಲಾಗಿದೆ.
ಅಲ್ಲಿ 369 ಪುರಾತನ, ಪ್ರಾಚೀನ ವಸ್ತುಗಳು ಅಲ್ಲಿವೆ.
ಅವುಗಳನ್ನು ನಾನು ನೋಡಿದ ಮೇಲೆ, ಅವುಗಳನ್ನು ಜನರೂ ನೋಡಲು ಅವಕಾಶ ಕಲ್ಪಿಸಬೇಕು.
ಅಧ್ಯಯನ ಶೀಲರು ಅಧ್ಯಯನ ಮಾಡಬೇಕು, ಮಾಹಿತಿ ಸಂಗ್ರಹಕಾರರು ಮಾಹಿತಿ ಸಂಗ್ರಹ ಮಾಡಲು ಅನುಕೂಲವಾಗಲಿದೆ.ಹೀಗಾಗಿ ಅವುಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಲು ಚಿಂತಿಸಲಾಗಿದೆ ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ರಕ್ಷಣೆ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ.ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.ಮೈಸೂರಿಗೆ ಬರುವ ಪ್ರವಾಸಿಗರಿಗೆ ಕ್ಯು ಆರ್ ಕಾರ್ಡ್ ವಿತರಣೆಗೆ ಚಿಂತಿಸಲಾಗಿದೆ.
ಆ ಮೂಲಕ ಪ್ರವಾಸಿಗರು ಒಂದು ಕಡೆ ಟಿಕೆಟ್ ಖರೀದಿಸಿ ಇಡೀ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೈಸೂರು ವಸ್ತು ಪ್ರದರ್ಶನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ವದೇಶಿ ದರ್ಶನ್ ಯೀಜನೆಯಡಿ 80 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ವಿಚಾರ.ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ.ಈ ಸಂಬಂಧ ಪ್ರತಾಪ್ ಸಿಂಹ ಸಭೆ ನಡೆಸಿರುವ ವಿಚಾರವು ನನ್ನ ಗಮನಕ್ಕೆ ಬಂದಿಲ್ಲ.
ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ.
ಕಳೆದ ಐದು ವರ್ಷ ಕಾಲದಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದರು.