ಉಡುಪಿ: ಯುವಕನೋರ್ವ ರೀಲ್ಸ್ ಮಾಡಲು ಹೋಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊAಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ.
ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ರೀಲ್ಸ್ ಮಾಡಲು ಹೋಗಿ ಜಾರಿ ಜಲಪಾತಕ್ಕೆ ಬಿದ್ದು ಯುವಕ ನೀರು ಪಾಲಾಗಿದ್ದಾನೆ. ಸೋಮವಾರ ಬೆಳಗ್ಗೆ 11.30ರವರೆಗೂ ಅವರ ಮೃತದೇಹ ಪತ್ತೆಯಾಗಿಲ್ಲ.
ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದಾಗ ಈ ದುರಂತ ನಡೆದಿದ್ದು, ಯುವಕ ಜಲಪಾತದಲ್ಲಿ ಬೀಳುತ್ತಿರುವ ದ್ರಶ್ಯ ಮತ್ತೊರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ. ಶರತ್ ಕುಮಾರ್ ತನ್ನ ಸ್ನೇಹಿತ ಗುರುರಾಜ್ ಜೊತೆ ಜಲಪಾತ ವೀಕ್ಷಣೆಗೆ ಬಂದಿದ್ದರು.
ಸತತ ಮಳೆಯಿಂದ ಜಲಪಾತವು ಜಾರುತ್ತಿತ್ತು, ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಟ್ರೆಕ್ಕಿಂಗ್ ಗೆ ಅವಕಾಶ ನೀಡಿರಲಿಲ್ಲ, ಆದರೆ ಇವರಿಬ್ಬರು ಅನುಮತಿ ಪಡೆಯದೆ ಅಲ್ಲಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಶರತ್ ಬಂಡೆಯ ಮೇಲೆ ನಿಂತಿದ್ದು, ಕಾಲು ಜಾರಿ ಮುಳುಗಿ ಸಾವನ್ನಪ್ಪಿದ್ದಾರೆ.
ಶರತ್ ಅವರ ಕುಟುಂಬ ಸದಸ್ಯರು ಸೋಮವಾರ ಕೊಲ್ಲೂರಿಗೆ ಆಗಮಿಸಿದ್ದರು.ಇನ್ನು ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸುತ್ತಿದ್ದು, ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ನದಿ-ಹಳ್ಳಗಳು ತುಂಬಿಹರಿಯುತ್ತಿವೆ. ಇದರಿಂದ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದೆ ಕೆಲವರು ಚೆಲ್ಲಾಟ ಆಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.