ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಅನೇಕ ಹಿಂಸಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ, ಇದರಲ್ಲಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಮಹಿಳೆಯರ ಮೇಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ. ಪೈಶಾಚಿಕ ಕೃತ್ಯದ ವಿಡಿಯೋವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಹೀನಾಯ ಕೃತ್ಯ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ. ಇದೀಗ ಕರಾಳ ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯರೊಬ್ಬರ ಪತಿ ಮಾತನಾಡಿದ್ದಾರೆ. ಪತ್ನಿಯನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡಿದರೂ ಅದನ್ನು ನೋಡಿ ಏನೂ ಮಾಡಲಾಗದ ಅಸಹಾಯಕತೆಯನ್ನು ಹೇಳಿಕೊಂಡು ಸಂತ್ರಸ್ತೆಯ ಪತಿ ಕಣ್ಣೀರಿಟ್ಟಿದ್ದಾರೆ.
ಸಂತ್ರಸ್ತೆಯ ಪತಿ ನಿವೃತ್ತ ಯೋಧನಾಗಿದ್ದು, ಕಾರ್ಗಿಲ್ ಯುದ್ಧದಲ್ಲೂ ದೇಶ ಸೇವೆ ಮಾಡಿದ್ದಾರೆ. ದೇಶದ ಪರವಾಗಿ ಶ್ರೀಲಂಕಾದಲ್ಲಿ ಕೆಲಸ ಮಾಡಿದ್ದಾರೆ. ಇದೀಗ ನಿವೃತ್ತ ಯೋಧ ಕರಾಳ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಗುಂಪೊಂದು ಮಹಿಳೆಯರನ್ನು ತಮ್ಮೊಂದಿಗೆ ಬಲವಂತವಾಗಿ ಕರೆದೊಯ್ದರು. ಬಳಿಕ ಬೆತ್ತಲೆಗೊಳಿಸಿದರು. ಅಲ್ಲಿ 2-3 ಮಹಿಳೆಯರಿದ್ದರು. ಅದರಲ್ಲಿ ಒಬ್ಬಳು ನನ್ನ ಪತ್ನಿ. ಇದೇ ವೇಳೆ ಓರ್ವ ಯುವತಿಯನ್ನು ರಕ್ಷಣೆ ಮಾಡಲು ಗ್ರಾಮದ ಜನರು ಬಂದಾಗ ಆ ದುಷ್ಟರ ಗ್ಯಾಂಗ್ ಯುವತಿಯ ತಂದೆಯ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದರು. ರಾಷ್ಟ್ರವನ್ನು ರಕ್ಷಣೆ ಮಾಡಿದ ನನಗೆ ನನ್ನ ಪತ್ನಿಯನ್ನು ರಕ್ಷಣೆ ಮಾಡಲು ಆಗಲಿಲ್ಲ. ಗ್ರಾಮದ ಜನರಿಂದಲೂ ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಈ ಪ್ರಕರಣ ಮಣಿಪುರದಲ್ಲಿ ಮತ್ತಷ್ಟು ಹಿಂಸಾತ್ಮಕ ಪ್ರತಿಭಟನೆ ಕಾರಣವಾಗಿದೆ. ಈ ಪ್ರಕರಣ ಸಂಬಂಧ ಗುರುವಾರ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹುಯಿರೆಮ್ ಹೆರಾದಾಸ್ ಸಿಂಗ್ ಮನೆಯನ್ನ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಪ್ರತಿಭಟನಾಕಾರರ ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ಹಿಂಸಾಚಾರವನ್ನು ಹತೋಟಿಗೆ ತರಲು ಇಬ್ಬರು ಡಿಐಜಿ (DIG) ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳು 5,000 ಸಿಆರ್‌ಪಿಎಫ್ (CRPF) ಯೋಧರಿಗೆ ಮಾರ್ಗದರ್ಶನ ನೀಡಲಿದ್ದಾರೆ