ಮೈಸೂರು : ಕೇಂದ್ರ ಬಿಜೆಪಿ ಹಾಗೂ ಸಂಸದ ಪ್ರತಾಪಸಿಂಹರಿಗೆ ನಿಜಕ್ಕೂ ನಾಚಿಕೆ, ಮಾನ ಮಾರ್ಯಾದೆ ಇಲ್ಲವೇ? ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರ ಕೆ.ಮಹೇಶ್ ಕಿಡಿಕಾರಿದ್ದಾರೆ.
ಸಂಸತ್ತಿನ ಕಲಾಪದಲ್ಲಿ ಮೃತಪಟ್ಟ ಹಾಲಿ ಹಾಗೂ ಮಾಜಿ ಸಂಸದ ಜನಪ್ರತಿನಿಧಿಗಳಿಗೆ ಶ್ರದ್ಧಾಂಜಲಿ ಕೋರಿ ಗೌರವ ಕೊಡುವುದು ಹಿಂದಿನಿಂದ ಬಂದಿದೆ. ಆದರೆ, ರಾಜ್ಯದಲ್ಲೇ ಅತಿಹೆಚ್ಚು ಅನುದಾನ ಬಳಕೆ ಮಾಡಿ ಹಿಂದುಳಿದ ಜಿಲ್ಲೆಯ ಅಭಿವೃದ್ಧಿ ಕೈಗೊಂಡಿದ್ದ ಮಾಜಿ ಸಂಸದ ದಿವಂಗತ ಆರ್.ದ್ರುವನಾರಾಯಣ್ ಅವರನ್ನು ಮೊದಲ ದಿನವೇ ನೆನೆಯದೇ ಅಪಮಾನ ಮಾಡಿರುವುದು ಖಂಡನೀಯ. ಆ ಮೂಲಕ ಕೇಂದ್ರ ಬಿಜೆಪಿಯ ರಾಜಕೀಯ ದ್ವೇಷ ಮುಖವಾಡ ಕಳಚಿದೆ ಇದಕ್ಕೆ ಸೊಪ್ಪು ಹಾಕಿರುವ ಸಂಸದ ಪ್ರತಾಪಸಿಂಹ
ಶುಕ್ರವಾರ ಪತ್ರ ಬರೆದು ಅನಂತರ ಶ್ರದ್ಧಾಂಜಲಿ ಕೋರುವಂತೆ ಮಾಡಿದ್ದಾರೆ. ಅದನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಪ್ರಚಾರ ಪಡೆಯಲು ಹೊರಟಿದ್ದಾರೆ ಎಂದಿದ್ದಾರೆ.
ಬಿಜೆಪಿ ಅವಧಿಯಲ್ಲಿ ಮೃತರಿಗೆ ಶ್ರದ್ಧಾಂಜಲಿ ಕೋರುವುದಕ್ಕೂ ಪತ್ರ ಬರೆಯಬೇಕೆಂಬುದನ್ನು ತೋರಿಸಿಕೊಟ್ಟಿರುವುದು ಕೇಂದ್ರ ಬಿಜೆಪಿ ಹಾಗೂ ಸಂಸದರ ನಾಚಿಕೆಗೇಡಿನ ಸ್ಥಿತಿಯಾಗಿದೆ. ಸಾಲದೆಂಬಂತೆ ಇದೇ ದೊಡ್ಡ ಸಾಧನೆ ಎಂದೂ ಬಿಂಬಿಸಿಕೊಳ್ಳುತ್ತಿರುವ ಸಂಸದರಿಗೆ ನೈತಿಕತೆ ಇದ್ದಿದ್ದರೆ ಮೊದಲ ದಿನವೇ ಅವರನ್ನು ಸ್ಮರಿಸುವ ಕೆಲಸ ಮಾಡಿಸಬೇಕಿತ್ತು. ಅದನ್ನು ಹೊರತಾಗಿ ಪತ್ರ ಬರೆದು ಸ್ಮರಿಸುವ ಅಗತ್ಯವೂ ಇರಲಿಲ್ಲ. ಇದನ್ನೇ ಸಾಧನೆಯೆಂದು ಬಿಂಬಿಸಿಕೊಳ್ಳುವುದಕ್ಕೆ ಅವರಿಗೆ ನಾಚಿಕೆ ಆಗುವುದಿಲ್ಲವೇ ಇದೇ ಬಿಜೆಪಿಯ ನಿಜ ಸಂಸ್ಕೃತಿಯಾಗಿದೆ. ಇದು ಅವರ ತೋರಿಕೆ ಗೌರವ ಎಂಬುದು ಜಗಜಾಹೀರಾತಾಗಿದೆ. ಅಂತೆಯೇ ಮಾಜಿ ಸಂಸದ ದ್ರುವನಾರಾಯಣ್ ಅವರನ್ನು ಕೇಂದ್ರ ಸಂಸತ್ ನಲ್ಲಿ ಸ್ಮರಿಸದಿದ್ದರೂ ಮೈಸೂರು, ಚಾಮರಾಜನಗರದಲ್ಲಿ ಅವರ ಅಭಿವೃದ್ಧಿ, ಜನಪ್ರಿಯ ಕೆಲಸಗಳೇ ಅವರನ್ನು ನಿರಂತರವಾಗಿ ಸ್ಮರಿಸಲಿವೆ ಎಂದು ಮಹೇಶ್ ಹೇಳಿದ್ದಾರೆ.