ಬೆಂಗಳೂರು : ಅನ್ನಭಾಗ್ಯ ಯೋಜನೆಯಾಡಿ ಬಿಪಿಎಲ್ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ವರ್ಗಾಯಿಸಲು ಕರ್ನಾಟಕ ಸರ್ಕಾರ ಸೋಮವಾರ ಪ್ರಾರಂಭಿಸಿದೆ. ಯೋಜನೆಯ ಫಲಾನುಭವಿಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಹಣ ವರ್ಗಾವಣೆಯ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಬಾಗಲಕೋಟೆ, ಧಾರವಾಡ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಈಗಾಗಲೇ ಹಣವನ್ನು ವರ್ಗಾಯಿಸಿದೆ. ಉಳಿದ ಜಿಲ್ಲೆಗಳ ಕಾರ್ಡ್ದಾರರಿಗೆ ಮುಂದಿನ ದಿನಗಳಲ್ಲಿ ಹಣ ಸಿಗಲಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕವೂ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. https://ahara.kar.nic.in/status1/status_of_dbt.aspx ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಕಾರ್ಡ್ ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಹಣದ ಸ್ಥಿತಿಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಲು ಅಗತ್ಯವಿರುವ ಅಕ್ಕಿಯನ್ನು ಖರೀದಿಸಲು ತೊಂದರೆಯನ್ನು ಎದುರಿಸುತ್ತಿರುವ ಕರ್ನಾಟಕ ಸರ್ಕಾರವು ಅಕ್ಕಿ ಬದಲಿಗೆ ಹಣವನ್ನು ನೀಡಲು ನಿರ್ಧರಿಸಿದೆ. ಸರ್ಕಾರ ಭರವಸೆ ನೀಡಿದ ಐದು ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ ನೀಡಲು ನಿರ್ಧರಿಸಿದ್ದು, ಹಣವನ್ನು ಕುಟುಂಬದ ಮುಖ್ಯಸ್ಥರಿಗೆ ವರ್ಗಾಯಿಸಲಾಗುತ್ತದೆ.
ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ಇ-ಕೆವೈಸಿ ಮತ್ತು ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಬೇಕು.
ಕಾಂಗ್ರೆಸ್ ನೀಡಿದ ಐದು ಚುನಾವಣಾ ಗ್ಯಾರಂಟಿಗಳಲ್ಲಿ ಅನ್ನ ಭಾಗ್ಯ ಕೂಡ ಒಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯರು ಯೋಜನೆಯಡಿ 10 ಕೆಜಿ ಉಚಿತ ಅಕ್ಕಿಯನ್ನು ಪಡೆಯುತ್ತಾರೆ. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಸುಮಾರು 1.28 ಕೋಟಿ ಪಡಿತರ ಚೀಟಿದಾರರು ಈ ಯೋಜನೆಗೆ ಅರ್ಹರಾಗಿದ್ದಾರೆ.