ಮೈಸೂರು : ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆಗೆ ಇಳಿದಿದ್ದ ಬಿಜೆಪಿಗೆ ಆರಂಭದಲ್ಲೇ ಶಾಕ್ ಎದುರಾಗಿದೆ. ಕೊಲೆ ಪ್ರಕರಣದ ನಾಲ್ಕನೇ ಆರೋಪಿಯು ನಗರ ಪಾಲಿಕೆಯ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂಬುದು ತಿಳಿದುಬಂದಿದೆ.
ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಿವಾಸಕ್ಕೆ ಇಂದು ಬಿಜೆಪಿ ತಂಡ ಭೇಟಿ ನೀಡಿತು. ಅಷ್ಟೇ ಅಲ್ಲ, ಸತ್ಯಶೋಧನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿತ್ತು
ಸತ್ಯ ಶೋಧನೆಗಿಳಿದ ಬಿಜೆಪಿಗೆ ಆರಂಭದಲ್ಲೇ ಶಾಕ್ ಎದುರಾಗಿದೆ. ಪ್ರಕರಣದ ಆರೋಪಿಯೊಬ್ಬ ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂಬ ಸತ್ಯ ಬಹಿರಂಗವಾಗಿದೆ. ಪ್ರ‍್ರಕರಣದ ನಾಲ್ಕನೇ ಆರೋಪಿ ಶಂಕರ್ ಅಲಿಯಾಸ್ ತುಪ್ಪಾ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ.
ಪ್ರಕರಣದ ಎ1 ಆರೋಪಿ ಮಣಿಕಂಠ, ಸಂದೇಶ-ಎ2, ಅನಿಲ್-ಎ3, ಶಂಕರ್ ಅಲಿಯಾಸ್ ತುಪ್ಪಾ-ಎ4, ಮಂಜು-ಎ5, ಹ್ಯಾರಿಸ್-ಎ6 ಆರೋಪಿಗಳಾಗಿದ್ದಾರೆ. ಪ್ರಕರಣದ ಆರೋಪಿಯ ವಿಚಾರ ತಿಳಿದ ಬಿಜೆಪಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇದೀಗ ಸತ್ಯ ಶೋಧನೆಗಿಳಿದ ಬಿಜೆಪಿ ತಂಡದ ಸದಸ್ಯರು ಮೈಸೂರಿಗೆ ಬರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ವೇಣುಗೋಪಾಲ್ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್‌ಸಿಂಹ, ಶಾಸಕ ಶ್ರೀವತ್ಸ, ಮಾಜಿ ಸಚಿವ ಸಿ.ಎನ್. ಅಶ್ವಥ್ ನಾರಾಯಣ್, ಮಾಜಿ ಶಾಸಕರಾದ ಎನ್. ಮಹೇಶ್, ಪ್ರೀತಮ್ ಗೌಡ ಹಾಗೂ ತಂಡದ ಇತರ ಸದಸ್ಯರಾದ ಅರಣ್ಯ ವಸತಿ ಮತ್ತು ವಿಹಾರ ನಿಗಮ ಮಾಜಿ ಅಧ್ಯಕ್ಷ ಅಪ್ಪಣ್ಣ, ಪರಿಷತ್ ಮಾಜಿ ಸದಸ್ಯ ಪ್ರೊ. ಮಲ್ಲಿಕಾರ್ಜುನ, ಬಿಜೆಪಿ ಸದಸ್ಯರಾದ ವೈ.ವಿ. ರವಿಶಂಕರ್, ಮಂಗಳಾ ಸೋಮಶೇಖರ್ ಭೇಟಿ ನೀಡಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಸೋಮವಾರ ಪ್ರಕರಣದ A1 ಮತ್ತು A2 ಆರೋಪಿಗಳಾದ ಮಣಿಕಂಠ ಅಲಿಯಾಸ್ ಕೊಳೆ ಮಣಿ, ಸಂದೇಶ್‌ನನ್ನು ಪೊಲೀಸರು ಬಂಧಿಸಿದ್ದರು. ಇಂದು ನಾಲ್ವರನ್ನು ಬಂಧಿಸಿದ್ದಾರೆ. A3 ಅನಿಲ್, A4 ಶಂಕರ್ ಅಲಿಯಾಸ್ ತುಪ್ಪ, A5 ಮಂಜು ಹಾಗೂ A6 ಹ್ಯಾರಿಸ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.