ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ ಮೈಸೂರು ನಗರದಲ್ಲಿ ಆಷಾಢ ಸಂಭ್ರಮಕ್ಕೆ ಸಿದ್ಧತೆ ಪ್ರಾರಂಭವಾಗಿದ್ದು, ಜೂ.23ರಿಂದ ಆಷಾಢ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಕಳೆದ ಬಾರಿಗಿಂತಲೂ ಈ ಬಾರಿ ಅದ್ಧೂರಿ ಆಷಾಢ ಮಾಸಕ್ಕೆ ಸಿದ್ಧತೆ ನಡೆದಿದೆ. ಏಕೆಂದರೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ಆಷಾಢ ಆಚರಣೆಗೆ ಸಿದ್ದತೆ ನಡೆಯಲಿದೆ. ಮಾತ್ರವಲ್ಲದೆ, ವರ್ಷದಿಂದ ವರ್ಷಕ್ಕೆ ಆಷಾಢಕ್ಕೆ ಆಗಮಿಸುವ ಭಕ್ತರು ಹಾಗೂ ಗಣ್ಯರ ಸಂಖ್ಯೆಯೂ ಹೆಚ್ಚಳವಾಗಲಾರಂಭಿಸಿರುವುದು ಆಷಾಢ ಸಂಭ್ರಮವನ್ನು ಹಿಮ್ಮಡಿಗೊಳಿಸಿದೆ.
ಜು10ಕ್ಕೆ ವರ್ಧಂತಿ: ಜೂನ್ 23, 30- ಜುಲೈ7, 14ರ ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಜುಲೈ10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಜರುಗಲಿದೆ. ಅಷ್ಟು ದಿನ ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಮಂದಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುವುದು ವಿಶೇಷ.
ಹೊರ ರಾಜ್ಯದ ಭಕ್ತರು: ಆಷಾಢದಲ್ಲಿ ಶ್ರೀ ಚಾಮುಂಡೇಶ್ವರಿಯ ದರ್ಶನಕ್ಕೆ ವಿದೇಶವೂ ಸೇರಿ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಅದರಲ್ಲೂ ತಮಿಳುನಾಡು, ಕೇರಳ, ಆಂಧ್ರ ಹಾಗೂ ಮಹಾರಾಷ್ಟ್ರ ಭಾಗದಿಂದಲೂ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುವುದು ವಿಶೇಷ. ಈ ಹಿಂದೆ ತಮಿಳುನಾಡು ಸಿಎಂ ಆಗಿದ್ದ ಜಯಲಲಿತಾ ಸಹ ಚಾಮುಂಡೇಶ್ವರಿಯ ಪರಮ ಭಕ್ತೆಯಾಗಿದ್ದರು. ಮಾತ್ರವಲ್ಲದೆ, ಪ್ರತಿ ವರ್ಷ ಆಷಾಢದಲ್ಲಿ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಅಂತೆಯೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ದರ್ಶನ್ ಅವರು ಚಾಮುಂಡೇಶ್ವರಿಯ ದರ್ಶನಕ್ಕೆ ಆಗಮಿಸಿದರೆ, ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಮೆಟ್ಟಿಲು ಹತ್ತಿ ಪ್ರತಿ ವರ್ಷ ಹರಕೆ ತೀರಿಸುವುದು ಅವರ ವಿಶೇಷತೆಯಾಗಿದೆ.
ಗಣ್ಯರ ವಾಹನಕ್ಕೂ ಬೀಳುತ್ತಾ ಬ್ರೇಕ್: ಕಳೆದ ಸಾಲಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಶಿಫಾರಸ್ಸು ವದಿಂದ ಬೆಂಗಳೂರಿನ ಸಾವಿರಾರು ಮಂದಿ ಗಣ್ಯಾತೀ ಗಣ್ಯರ ಹೆಸರಿನಲ್ಲಿ ಕಾರಿನಲ್ಲಿ ಬಂದಿದ್ದರು. ಈ ಹಿನ್ನೆಲೆ ಚಾಮುಂಡಿ ಬೆಟ್ಟದ ರಸ್ತೆ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಸಂಚಾರ ದಟ್ಟಣೆ ಯುಂಟಾಗಿ ಬಸ್‍ನಲ್ಲಿ ಸಂಚರಿಸುವ ಭಕ್ತರೂ ತೊಂದರೆ ಅನುಭವಿಸುವಂತಾಗಿತ್ತು. ಇದಾದ ಬಳಿಕ ಶಾಸಕ ವಾಸು ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಸ್‍ನಲ್ಲಿ ಸರಳವಾಗಿ ಸಂಚರಿಸಿ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದರು. ಸದ್ಯ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಗಣ್ಯರಿಗೂ ಬಸ್‍ನಲ್ಲೇ ಪ್ರಯಾಣ ಮಾಡುವ ವ್ಯವಸ್ಥೆ ಜಾರಿಯಾಗುವುದೇ ಕಾದು ನೋಡಬೇಕಿದೆ.