ಮೈಸೂರು : ವಕೀಲರೊಬ್ಬರ ಮನೆಗೆ ಕನ್ನ ಹಾಕಿ 6 ಲಕ್ಷ ನಗದು ದೋಚಿದ್ದ 5 ಖತರ್ನಾಕ್ ಕಳ್ಳರನ್ನ ಬಂಧಿಸುವಲ್ಲಿ ಕುವೆಂಪುನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 2 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 20 ಲಕ್ಷ ಮೌಲ್ಯದ ಒಂದು ಕಾರು 40 ಸಾವಿರ ಮೌಲ್ಯದ ಆಕ್ಟಿವಾ ಹೋಂಡ,5 ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಮತ್ತೊಬ್ಬ ಪ್ರಮುಖ ಆರೋಪಿಯ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಅನಿಲ್ಕುಮಾರ್,ನರೇಂದ್ರ,ಪುಟ್ಟಸ್ವಾಮಿ,ಅಭಿಷೇಕ್,ಪ್ರಕಾಶ್ ಬಂಧಿತ ಆರೋಪಿಗಳು ಯೋಗಾನಂದ್@ಉಪೇಂದ್ರ ತಲೆ ಮರೆಸಿಕೊಂಡಿರುವ ಆರೋಪಿ.
ಮೇ 3 ರಂದು ಶ್ರೀರಾಂಪುರ ಬಡಾವಣೆಯಲ್ಲಿರುವ ಹಿರಿಯ ವಕೀಲರಾದ ಜಯಪ್ರಕಾಶ್ ರಾವ್ ಮನೆ ಬಾಗಿಲು ಮೀಟಿ 6 ಲಕ್ಷ ನಗದು ದೋಚಿದ್ದರು.ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 6 ಆರೋಪಿಗಳ ಪೈಕಿ ಐವರನ್ನ ಬಂಧಿಸಿದ್ದಾರೆ.
ಕೃತ್ಯ ನಡೆದ ನಂತರ ಸಿಸಿ ಕ್ಯಾಮರಾ ಫುಟೇಜ್ ಗಳನ್ನ ಆಧರಿಸಿ ಕಾರ್ಯಾಚರಣೆ ನಡೆಸಿದ ಕುವೆಂಪುನಗರ ಪೊಲೀಸರು ಖದೀಮರ ಹೆಡೆಮುರಿ ಕಟ್ಟಿದ್ದಾರೆ.ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಖದೀಮರು ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾರೆ.
ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಯೋಗಾನಂದ ನೊಟೋರಿಯಸ್ ಎಂದು ಹೇಳಲಾಗಿದೆ.ಈತನ ವಿರುದ್ದ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.ಡಕಾಯಿತಿ,ರಾಬರಿ,ಕನ್ನಕಳವು ಕೇಸ್ ಗಳಲ್ಲಿ ಈತ ಭಾಗಿಯಾಗಿದ್ದಾನೆ.
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಅರುಣ್ ರವರ ನೇತೃತ್ವದಲ್ಲಿ ಪಿಐ ಗಳಾದ ಗೋಪಾಲ್,ಕು.ರಾಧ ಹಾಗೂ ಸಿಬ್ಬಂದಿಗಳಾದ ಕುಮಾರ್,ಮಂಜುನಾಥ,ಆನಂದ,ಪುಟ್ಟಪ್ಪ,ಹಜರತ್,ಸುರೇಶ್,ನಾಗೇಶ್,ಶ್ರೀನಿವಾಸ್,ಅಮೋಘ್ ರವರು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಉಪಪೋಲೀಸ್ ಆಯುಕ್ತರಾದ ಎಂ.ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ…