ಬೆಂಗಳೂರು : ಜೆಡಿಎಸ್ ಪಕ್ಷ ವಿಸರ್ಜನೆ ಮುಹೂರ್ತ ಯಾವಾಗ ಎಂದು ಟಾಂಗ್ ಕೊಟ್ಟಿದ್ದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಪಕ್ಷ ವಿಸರ್ಜನೆ ಮಾಡಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಹೆಚ್‌ಡಿಕೆ, ಪಕ್ಷ ವಿಸರ್ಜನೆ, ಅಂತಿಮ ಸಂಸ್ಕಾರದ ಹೇಳಿಕೆ ಕೊಟ್ಟ ಸಂಸ್ಕಾರಹೀನರಿಗೆ ಹೇಳುವುದು ಇಷ್ಟೇ. ನನಗೆ 123 ಸೀಟು ಬಂದಿಲ್ಲ, ಪಂಚರತ್ನ ಜಾರಿಗೆ ಜನರು ಅವಕಾಶವನ್ನೂ ಕೊಟ್ಟಿಲ್ಲ, ಹಾಗಾಗಿ ಪಕ್ಷವನ್ನು ವಿಸರ್ಜನೆ ಮಾಡುವುದೂ ಇಲ್ಲ. ಇನ್ನೇನಾದರೂ ಅನುಮಾನ ಇದ್ದವರು ಬರಲಿ, ಅಂಥವರ ಅಜ್ಞಾನ ಹೋಗಲಾಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ
ಚುನಾವಣೆ ಫಲಿತಾಂಶ ಬಂದಿದೆ. ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಹಾಗೂ ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯ ಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ. ಇಷ್ಟು ಅವಿವೇಕವುಳ್ಳ ಇವರ ಮುಂದಿನ ಆಡಳಿತ ಈಗಲೇ ಆತಂಕವಾಗುತ್ತಿದೆ ಎಂದು ಚಾಟಿ ಬೀಸಿದ್ದಾರೆ.
ಗೆದ್ದ ಅಹಂಕಾರದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ ಈ ಅಹಂ ಹೆಚ್ಚು ದಿನ ಉಳಿಯಲ್ಲ, ಈಗಾಗಲೇ ಜನರು ಕಾಂಗ್ರೆಸ್ ಯೋಜನೆಗಳ ಬಗ್ಗೆ ಮಾತಾಡುತ್ತಿದ್ದಾರೆ ಕೊಟ್ಟ ಭರವಸೆ ಪೂರೈಸದಿದ್ದಾರೆ ಜನರೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡುತ್ತಾರೆ ಎಲ್ಲಾದಕ್ಕೂ ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದಿದ್ದಾರೆ.