ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಹೊಸ ಸರ್ಕಾರದ ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾಗಿ ಪರಿಣಮಿಸಿದೆ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 4 ದಿನಗಳಾದರೂ, ವಿರೋಧ ಪಕ್ಷದ ನಾಯಕರು ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಬಿಜೆಪಿಯಲ್ಲಿ ಉತ್ತರ ಸಿಕ್ಕಿಲ್ಲ.
ಚುನಾವಣಾ ಫಲಿತಾಂಶ ಬಂದು 10 ದಿನಗಳು ಕಳೆದಿವೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಈಗಾಗಲೇ ವಿಳಂಬವಾಗಿದೆ. ವಿಪಕ್ಷ ನಾಯಕ, ಉಪನಾಯಕ ಮತ್ತು ಸಚೇತಕನ ಆಯ್ಕೆಯಲ್ಲೂ ಜಾತಿ ರಾಜಕಾರಣ ಕೆಲಸ ಮಾಡುತ್ತಿದೆಯೇ? ಹೈಕಮಾಂಡ್ ನಿರ್ಣಯವೇ ಅಂತಿಮವೇ? ಅಲ್ಲದೆ ನಾಯಕರ ಸ್ಥಾನವನ್ನು ತುಂಬಲು ಯಾವೆಲ್ಲ ಲೆಕ್ಕಾಚಾರಗಳು ಮುಖ್ಯವಾಗುತ್ತವೆ ಎನ್ನುವ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿದೆ.
ಈ ಬಾರಿ ಯಡಿಯೂರಪ್ಪ ಚುನಾವಣೆ ರಾಜಕಾರಣದಿಂದ ಹಿಂದೆ ಸರಿದಿದ್ದರು. ಬಿಜೆಪಿ ಹಿರಿಯ ಹಾಗೂ ಕೆಲ ಡೈನಮಿಕ್ ನಾಯಕರು ಸೋತು ಸುಣ್ಣವಾಗಿದ್ದಾರೆ. ಹೀಗಿರುವಾಗ ಒಬ್ಬ ಪ್ರಭಲ ವಿಪಕ್ಷ ನಾಯಕನ ಹುಡುಕಾಟದಲ್ಲಿ ಬಿಜೆಪಿ ನಿರತವಾಗಿದ್ದು ಯಾರನ್ನು ಆಯ್ಕೆ ಮಾಡಬೇಕು ಎಂಬುದು ತಲೆ ನೋವಾಗಿ ಪರಿಣಮಿಸಿದೆ
ವಿಪಕ್ಷ ನಾಯಕ ರೇಸ್ ನಲ್ಲಿ ಬಸವರಾಜ್ ಬೊಮ್ಮಯಿ, ಯತ್ನಾಳ್, ಸುನೀಲ್ ಕುಮಾರ್ ಹಾಗೂ ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆ. ಮೊದಲ ಬಾರಿ ಎಂ.ಎಲ್. ಎ ಆಗಿರುವ ವಿಜಯೇಂದ್ರ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತವಲ್ಲ ಹಾಗೂ ಸದನದಲ್ಲಿ ಅನುಭವದ ಕೊರತೆಯಿದೆ ಎಂಬುದು ಬಿಜೆಪಿ ಹಿರಿಯರ ವಾದವಾಗಿದೆ. ಬೊಮ್ಮಾಯಿ ಅಥವಾ ಯತ್ನಾಳ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಬಹುದು ಎಂಬ ಗುಸು ಗುಸು ಬಿಜೆಪಿಯಲ್ಲಿ ಕೇಳಿಬರುತ್ತಿದೆ