ಮೈಸೂರು : ಕ್ರಿಕೆಟ್ ಪ್ರೇಮಿಗಳಿಗೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಣೆಯ ಅನುಭವ ನೀಡುವ ಸಲುವಾಗಿ ಮೇ 20 ಮತ್ತು 21ರಂದು ಮೈಸೂರು ವಿಶ್ವ ವಿದ್ಯಾನಿಲಯದ ಮಹಾರಾಜ ಕಾಲೇಜು ಹಿಂಭಾಗದ ಸ್ಪೋರ್ಟ್ಸ್ ಪೆವಿಲಿಯನ್ ಫುಟ್‌ಬಾಲ್ ಮೈದಾನದಲ್ಲಿ ಬೃಹತ್ ಎಲ್‌ಇಡಿ ಪರದೇ ಮೂಲಕ ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಬಿಸಿಸಿಐ ವ್ಯವಸ್ಥಾಪಕ ಅನಂತ್ ದತ್ತಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಪಿಎಲ್ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಪಂದ್ಯಾವಳಿ ನಡೆಯುವ ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗದವರಿಗಾಗಿ ಕ್ರಿಕೆಟ್ ಮಂಡಳಿ ಈ ವ್ಯವಸ್ಥೆ ಮಾಡಿದೆ. ರಾಜ್ಯದ ಹುಬ್ಬಳ್ಳಿ ಹಾಗೂ ಮೈಸೂರು ನಗರಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಿಸಿದ್ದು ಪಂದ್ಯದ ನೇರ ಪ್ರಸಾರ ಮಾಡಲಾಗುವುದೆಂದರು.
ಬೃಹತ್ ಪರದೆಯ ಮೇಲೆ ಸೆರೆಹಿಡಿಯಲಾದ ಪ್ರತಿ ರೋಮಾಂಚಕ ಕ್ಷಣಗಳೊಂದಿಗೆ ಪ್ರಸಾರ ಮಾಡಲಾಗುವುದು. ಈ ವೇಳೆ ಸಂಗೀತ, ಫುಡ್ ಸ್ಟಾಲ್‌ಗಳು, ಪಾನೀಯಗಳ ಮಳಿಗೆ ಸಹಾ ಇರಲಿವೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಪ್ರಯೋಜನ ಪಡೆಯಬೇಕೆಂದರು.
ಮೊದಲ ದಿನ ಮಧ್ಯಾಹ್ನ ೩.೩೦ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್, ಸಂಜೆ 7.30ಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವರ್ಸಸ್ ಲಕ್ನೊ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಹಾಗೂ ಮೇ 21 ರಂದು ಮಧ್ಯಾಹ್ನ 3.30ಕ್ಕೆ ಮುಂಬೈ ಇಂಡಿಯನ್ಸ್ ವರ್ಸಸ್ ಸನ್‌ರೈಸರ್ಸ್ ಹೈದ್ರಾಬಾದ್ ಹಾಗೂ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮೈಸೂರು ವಲಯ ಅಧ್ಯಕ್ಷ ಬಾಲಚಂದರ್, ಸಂಚಾಲಕ ಹರಿಕೃಷ್ಣಕುಮಾರ್ ಇದ್ದರು.