ಸಾರ್ವಜನಿಕರು ದೂರು ನೀಡಲು ಬೂತ್ ಅಧ್ಯಕ್ಷರ ಮನೆ ಮುಂದೆ ಸಲಹಾ ಪೆಟ್ಟಿಗೆ : ಶ್ರೀವತ್ಸ
ಮೈಸೂರು : ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕೆ.ಆರ್.ಕ್ಷೇತ್ರದ ೨೬೫ ಬೂತ್ ಅಧ್ಯಕ್ಷರ ಮನೆ ಮುಂದೆ ದೂರು, ಸಲಹಾ ಪೆಟ್ಟಿಗೆ ಸ್ಥಾಪಿಸಲಾಗುವುದು ಎಂದು ನೂತನ ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ರಾಜೇಂದ್ರ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕರ್ತರು,ಹಿತೈಷಿಗಳಿಗೆ ಕೃತಜ್ಞತಾ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿ ಮಾತನಾಡಿದ ಅವರು, ತಿಂಗಳ ಒಳಗಡೆ ಸಲಹಾ ಪೆಟ್ಟಿಗೆ ಸ್ಥಾಪಿಸುತ್ತೇನೆ. ಜನರು ಅಲ್ಲಿ ಸಮಸ್ಯೆಗಳನ್ನು ಬರೆದು ಹಾಕಬಹುದು. ೧೯ ವಾರ್ಡ್ ಅಧ್ಯಕ್ಷರು ಇದನ್ನು ನಿರ್ವಹಿಸುತ್ತಾರೆ. ಇದರಿಂದ ಬೂತ್ ಅಧ್ಯಕ್ಷರು ಸಾರ್ವಜನಿಕರ ಸಂಪರ್ಕಕ್ಕೆ ಬರುತ್ತಾರೆ. ಅಲ್ಲದೇ ನೇರವಾಗಿ ತಮ್ಮನ್ನು ಸಂಪರ್ಕಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.
ನಾಲ್ಕೈದು ತಿಂಗಳಲ್ಲಿ ಜೆ.ಪಿ ನಗರವನ್ನು ಕಸಮುಕ್ತ ನಗರನ್ನಾಗಿ ಮಾಡಲಾಗುವುದು. ಕಸ ತೆರವು ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರ ಟೆಂಡರ್ ಕರೆದು ಹಲವು ವರ್ಷಗಳಿಂದ ನಾಗರಿಕರು ಅನುಭವಿಸುತ್ತಿರುವ ನರಕಯಾತನೆ ನಿವಾರಿಸುತ್ತೇನೆ ಎಂದು ಹೇಳಿದರು.
ರಸ್ತೆ ಡಾಂಬರೀಕರಣ ಸಂಬಂಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ವಿವೇಕಾನಂದನಗರದಿಂದ ಭ್ರಮರಾಂಬ ಛತ್ರದವರೆಗೆ ತ್ವರಿತಗತಿಯಲ್ಲಿ ಡಾಂಬರೀಕರಣ ಮಾಡುವಂತೆ ಸೂಚಿಸಿದ್ದೇನೆ. ಎಲ್ಲ ಸಾರ್ವಜನಿಕ ಕೆಲಸಗಳು ವೇಗ ಪಡೆದುಕೊಳ್ಳಲಿವೆ ಎಂದು ಭರವಸೆ ನೀಡಿದರು.
ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿರಲಿಲ್ಲ. ಕ್ಷೇತ್ರದ ಕಾರ್ಯಕರ್ತರು ನನ್ನ ಹೆಸರು ಸೂಚಿಸಿದ್ದರಿಂದ ಟಿಕೆಟ್ ದೊರೆಯಿತು. ಹಗಲು ರಾತ್ರಿ ನನ್ನ ಪರವಾಗಿ ಕೆಲಸ ಮಾಡಿದರು. ಕಾಂಗ್ರೆಸ್ ಪರವಾದ ಅಲೆಯಲ್ಲೂ ನನ್ನ ಗೆಲ್ಲಿಸಿದರು. ಇದರ ಸಂಪೂರ್ಣ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕು.
– ಟಿ.ಎಸ್.ಶ್ರೀವತ್ಸ, ಶಾಸಕ
ಚುನಾವಣೆ ವೇಳೆ ನನ್ನ ವಿರುದ್ಧ ಕುತಂತ್ರ ನಡೆಯಿತು. ವಿಡಿಯೋ ಹರಿಯಬಿಡಲಾಯಿತು. ೪೦ ಸಾವಿರ ಮನೆಗಳಿಗೆ ಪತ್ರಗಳನ್ನು ಕಳುಹಿಸಲಾಯಿತು. ಅದರಲ್ಲಿ ಯಾವ ಬಂಡವಾಳವೂ ಇರಲಿಲ್ಲ. ಆ ಪತ್ರವನ್ನು ಹರಿದು ಎಸೆದರು. ನನ್ನನ್ನು ಗೆಲ್ಲಿಸಿದರು ಎಂದರು.
ಪಾದಯಾತ್ರೆ ಮಾಡಬೇಕಾದರೆ ಕೃಷ್ಣಮೂರ್ತಿಪುರಂನಲ್ಲಿ ವಯೋವೃದ್ಧರೊಬ್ಬರು ವೀಳ್ಯದಲೆ ಮೇಲೆ ೫೦೦ ರೂ. ಕೊಟ್ಟು ಆರ್ಶಿವಾದ ಮಾಡಿದರು. ಜಯನಗರದಲ್ಲಿ ವ್ಯಕ್ತಿಯೊಬ್ಬರು ೧೫೦೦ ರೂ. ನೀಡಿದರು. ಸಿದ್ಧಾರ್ಥ ಬಡಾವಣೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಕೂಲಿ ಕಾರ್ಮಿಕ ೫೦೦ ರೂ. ಕೊಟ್ಟ. ಹೀಗೆ ನೂರಾರು ಕಾರ್ಯಕರ್ತರು ಧನ ಮನ ಸಹಾಯದೊಂದಿಗೆ ಸಹಾಯ ಮಾಡಿದರು. ನನ್ನ ಗೆಲುವಿಗಾಗಿ ಹಲವು ಕಾರ್ಯಕರ್ತರು ಹರಕೆ ಹೊತ್ತಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಈ ಫಲಿತಾಂಶ ನಮೆಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಎಚ್ಚರಿಕೆ ನೀಡಿದೆ. ಪಾಲಿಕೆಯ ಚುನಾವಣೆಯಲ್ಲಿ ೧೯ ವಾರ್ಡ್‌ಗಳಲ್ಲೂ ಜಯ ಸಾಧಿಸುವ ಗುರಿ ಹೊಂದಬೇಕಿದೆ ಎಂದು ಹೇಳಿದರು.
ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ನಾವು ಮಾಡಿದ ಕಾರ್ಯಕ್ರಮಗಳು ಕಾರಣವಾಗಿವೆ. ಬೂತ್ ಸಶಕ್ತಿಕರಣ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ೭೦ ಸಾವಿರ ಮನೆಗಳಿಗೆ ರಾಜ್ಯ, ಕೇಂದ್ರ ಸರ್ಕಾರಗಳ ಒಂದಲ್ಲ ಒಂದು ಕಾರ್ಯಕ್ರಮ ತಲುಪಿಸಲಾಯಿತು ಎಂದರು.
ಕ್ಷೇತ್ರದ ಪೂರ್ಣ ರಸ್ತೆ ಡಾಂಬರೀಕಣ ಆಗಿದೆ. ೮ ಸಾವಿರ ಜನರಿಗೆ ಮನೆ ನೀಡಲಾಯಿತು. ೧೮ ಕೋಟಿ ವೆಚ್ಚದಲ್ಲಿ ಉದ್ಯಾನಗಳ ಅಭಿವೃದ್ಧಿ, ಅಲ್ಪಸ್ವಲ್ಪ ಕೆಲಸ ಉಳಿದಿದೆ. ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಸವಾಲಿನ ನಡುವೆ ನೂತನ ಶಾಸಕರು ಕೆಲಸ ಮಾಡಬೇಕಿದೆ ಎಂದು ನುಡಿದರು.
ಕೆ.ಆರ್.ಕ್ಷೇತ್ರದ ಪ್ರಭಾರಿ ವೀರೇಂದ್ರ ಶಾ ಮಾತನಾಡಿ, ಕೆ.ಆರ್.ಕ್ಷೇತ್ರದ ಮತದಾರರು ಉಚಿತ ಘೋಷಣೆಗಳಿಗೆ ಮರುಳಾಗದೇ ರಾಷ್ಟ್ರೀಯ ಉದ್ದೇಶಕ್ಕೆ ಮತ ನೀಡಿರುವುದಕ್ಕೆ ಕೃತಜ್ಞರಾಗಿದ್ದೇವೆ. ಈ ಫಲಿತಾಂಶ ಪಾಲಿಕೆ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಸಿದ್ದರಾಜು, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಕೆ.ಆರ್.ಮಂಡಲದ ಅಧ್ಯಕ್ಷ ವಡಿವೇಲು, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ನಿಗಮ ಮಂಡಲಿ ಮಾಜಿ ಅಧ್ಯಕ್ಷರಾದ ರಘು ಕೌಟಿಲ್ಯ, ಯಶಸ್ವಿ ಸೋಮಶೇಖರ್, ಶಿವಕುಮಾರ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮೈಸೂರು ನಗರ ಬ್ರಾಹಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮುಂತಾದವರಿದ್ದರು.
ವರುಷಗಳ ಕಾಲ ದುಡಿಮೆ ಮಾಡಿ, ಭೂಮಿಯನ್ನು ಉತ್ತು ಬಿತ್ತು ಹದ ಮಾಡಿ ಬೀಜ ಬಿತ್ತನೆ ಮಾಡಿ ಫಲ ಬಂದು ಊಟಕ್ಕೆ ಕುಂತಾಗ ನನ್ನನ್ನು ಅಲ್ಲಿಂದ ಎಬ್ಬಿಸಿದರಲ್ಲ ಎಂದು ಬೇಸರವಿದೆ. ಆದರೆ, ೩೦ ವರ್ಷಗಳ ಹಿಂದೆ ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಮಾಡಿ ಮಂತ್ರಿ ಮಾಡಿ ಸೇವೆ ಮಾಡಲು ಪಕ್ಷ ಅವಕಾಶ ನೀಡಿದ್ದನ್ನು ಮರೆಯಲಾಗುವುದೇ? ನೋವಾದರೂ ಪಕ್ಷದ ವಿರುದ್ಧ ಹೋಗಲಿಲ್ಲ.
-ಎಸ್.ಎ.ರಾಮದಾಸ್, ಮಾಜಿ ಶಾಸಕ