ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಇನ್ನೂ ಚರ್ಚೆ ನಡೆಸುತ್ತಿದೆ.
ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಜೊತೆ ಒನ್ ಟು ಒನ್ ಸಭೆ ನಡೆಸಿ, ಇಬ್ಬರು ನಾಯಕರ ವಾದವನ್ನು ಆಲಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅಂತಿಮ ಸುತ್ತಿನ ಸಭೆ ನಡೆಯಲಿದ್ದು, ಇದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ.
ಮೂಲಗಳ ಪ್ರಕಾರ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿದ ನಂತರ ಖರ್ಗೆ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
“ಕರ್ನಾಟಕ ಸಿಎಂ ಸ್ಥಾನದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕಾಂಗ್ರೆಸ್ ಅಧ್ಯಕ್ಷರು ಇಬ್ಬರು ನಾಯಕರನ್ನು ಭೇಟಿ ಮಾಡಿದ್ದಾರೆ. ಈಗ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಖರ್ಗೆ ಅವರು ಇಂದು ಬೆಂಗಳೂರಿನಲ್ಲಿಯೇ ಸಿಎಂ ಹೆಸರು ಘೋಷಣೆ ಮಾಡಬಹುದು” ಎಂದು ಮೂಲಗಳು ತಿಳಿಸಿವೆ.ಖರ್ಗೆ ಭೇಟಿ ವೇಳೆ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿರುವ ಸದ್ಯದ ಪರಿಸ್ಥಿತಿಗೆ ನಾನೇ ಸೂಕ್ತ. ಹೀಗಾಗಿ ಸಿಎಂ ಸ್ಥಾನವನ್ನು ನನಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಹಿಂದ ಮತಗಳಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅಹಿಂದ ಮತಗಳು ತನ್ನಿಂದಲೇ ಬಂದಿದೆ. ಹಲವು ಸಮುದಾಯಗಳು ಸಿದ್ದರಾಮಯ್ಯ ಸಿಎಂ ಎಂದೇ ಮತ ಹಾಕಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಮೇಲೆ ಸಿಬಿಐ ಕೇಸ್‍ಗಳು ಪ್ರಗತಿಯಲ್ಲಿದೆ. ಇದೀಗ ಸಿಎಂ ಹುದ್ದೆ ಡಿಕೆ ಶಿವಕುಮಾರ್‍ಗೆ ನೀಡಿದರೆ, ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಗಲಿದೆ ಎಂದು ಸಿದ್ದರಾಮಯ್ಯ ತಮ್ಮ ವಾದ ಮಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.