ದೆಹಲಿ : ನೂತನ ಮುಖ್ಯಮಂತ್ರಿಯ ಆಯ್ಕೆ ವಿಚಾರದಲ್ಲಿ ಸಂದಿಗ್ಧತೆ ಮುಂದುವರೆದಿದ್ದು ಇಂದು ಈ ಸಮಸ್ಯೆ ಬಗೆ ಹರಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಶಿಮ್ಲಾದಿಂದ ಸೋನಿಯಾ ಗಾಂಧಿ ದೆಹಲಿಗೆ ಆಗಮಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಇಂದು ಸಂಜೆ ಅಥವಾ ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಕರೆದು ನೂತನ ಸಿಎಂ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.
ಹೈಕಮಾಂಡ್ ಮಟ್ಟದಲ್ಲಿ ಇಬ್ಬರೂ ನಾಯಕರನ್ನು ಬೆಂಬಲಿಸುವ ನಾಯಕರಿದ್ದಾರೆ. ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಸಿದ್ದರಾಮಯ್ಯ ಪರವಾಗಿದ್ದರೆ ಪ್ರಿಯಾಂಕಾ ವಾದ್ರಾ ಡಿಕೆಶಿ ಪರವಾಗಿದ್ದಾರೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ತಟಸ್ಥವಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಜೊತೆ ಮಂಗಳವಾರ ಸತತ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ ಸಿದ್ದರಾಮಯ್ಯ 50:50 ಸೂತ್ರಕ್ಕೆ ಒಪ್ಪದೇ ಪೂರ್ಣಾವಧಿ ಸಿಎಂ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರ ಹಂಚಿಕೆ ಆಗಬಾರದು. ಸಿಎಂ ಘೋಷಣೆಗೂ ಮುನ್ನವೇ ನಿರ್ಧಾರ ಪ್ರಕಟಿಸಬೇಕು ಅಂತ ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.
ಸೋತು ಸುಣ್ಣವಾಗಿದ್ದ ಯಾರು ಮುಂದೆ ಬಾರದ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಏರಿ ಪಕ್ಷ ಸಂಘಟನೆ ಮಾಡಿದ ಪರಿಣಾಮ ಈ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದವರಿಗೆ ಸಿಎಂ ಪಟ್ಟ ನೀಡುವುದು ಇಲ್ಲಿಯವರೆಗೆ ನಡೆದುಕೊಂಡು ಬಂದ ಸಂಪ್ರದಾಯ. ಈ ಕಾರಣಕ್ಕೆ ನನಗೆ ಸಿಎಂ ಪಟ್ಟ ನೀಡಬೇಕೆಂದು ಬಲವಾದ ವಾದವನ್ನು ಡಿಕೆ ಶಿವಕುಮಾರ್ ಮಂಡಿಸಿದ್ದಾರೆ.