ಬೆಂಗಳೂರು : SC ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ST ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ,ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಭಜರಂಗ ದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್,ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಸೇರಿ ಹಲವರು ಭಾಗಿಯಾಗಿದ್ದರು.
ಪ್ರಣಾಳಿಕೆ ಹೈಲೈಟ್ಸ್
ಬಿಜೆಪಿ ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳು ಒಂದು ವರ್ಷದಲ್ಲಿ ರದ್ದುಗೊಳಿಸುವುದರ ಜೊತೆಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಮೊದಲೇ ಘೋಷಿಸಿರುವ ಗೃಹಶಕ್ತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಜೊತೆಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ 3000ರೂ. ಪದವೀಧರರಿಗೆ, 1500 ರೂ, ಡಿಪ್ಲೊಮಾ ಪದವೀಧರರಿಗೆ ನೀಡುತ್ತೇವೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ಉಚಿತ 10 ಕೆಜಿ ಅಕ್ಕಿ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಪ್ರತಿ ಮನೆಯ ಯಜಮಾನಿಗೆ ನೀಡಲಾಗುವುದು. ಜೊತೆಗೆ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು ಎಂದು ಹೇಳಿದೆ.
ರಾಷ್ಟ್ರೀಯ ಶಿಕ್ಷಣ ನೀತಿ NEP ರದ್ದುಗೊಳಿಸುತ್ತೇವೆ ಎಂದು ಘೋಷಣೆ ಮಾಡಿರುವ ಕಾಂಗ್ರೆಸ್, ಜೊತೆಗೆ ಪಠ್ಯಪುಸ್ತಕ ಮರಳಿ ಪರಿಷ್ಕರಣೆಗೊಳಿಸಲಾಗುವುದು. ಪಿಯುಸಿಯಿಂದ ಪಿಜಿವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್, ಡಿಜಿಟಲ್ ನೋಟ್ ಪ್ಯಾಡ್ ಉಚಿತವಾಗಿ ನೀಡಲಾಗುವುದು. ಎರಡು ವರ್ಷಗಳಿಗೊಮ್ಮೆ ಹಿರಿಯ ನಾಗರಿಕರಿಗೆ ರಾಜ್ಯದ 15, ದೇಶದ 10 ಪ್ರವಾಸಿ ತಾಣಗಳಿಗೆ ಉಚಿತ ಯಾತ್ರಾ ಪ್ರವಾಸ ಮಾಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದೆ.
ಎಸ್ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ,ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಬಿಜೆಪಿ ಒಳ ಮೀಸಲಾತಿ ರದ್ದುಗೊಳಿಸಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ ಮಾಡಲಾಗುತ್ತದೆ. ಎಸ್ಸಿ-ಎಸ್ಟಿ ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ತಿಳಿಸಿದೆ.