ಟಿ.ನರಸೀಪುರ : ತ್ರಿವೇಣಿ ಸಂಗಮದಲ್ಲಿ ಈ ಬಾರಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಈ ಬಾರಿಯ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಿಂದ ಈಗಾಗಲೇ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪಗೆ ಟಿಕೆಟ್ ಘೋಷಣೆಯಾಗಿದ್ದು, ಜೆಡಿಎಸ್ ನಿಂದ ಹಾಲಿ ಶಾಸಕ ಅಶ್ವಿನ್ ಕುಮಾರ್ ಅಖಾಡದಲ್ಲಿದ್ದಾರೆ. ಬಿಜೆಪಿಯಿಂದ ಇನ್ನೂ ಟಿಕೆಟ್ ಘೋಷಣೆಯಾಗಬೇಕಿದ್ದು ಬಹುತೇಕ ಹೊಸ ಮುಖ ವೈದ್ಯ ರೇವಣ್ಣಗೆ ಬಿಜೆಪಿ ಮಣೆ ಹಾಕುವ ಸಾಧ್ಯತೆಯಿದೆ.
ಕಳೆದ ಬಾರಿ ಚುನಾವಣೆಯನ್ನು ಗಮನಿಸಿದರೆ ಮಹದೇವಪ್ಪ ಎದುರು ಅಶ್ವಿನ್ ಕುಮಾರ್ ಗೆದ್ದು ಬಿಗಿದ್ದರು. ಬಿಜೆಪಿ ಅಭ್ಯರ್ಥಿ ಶಂಕರ್ ಟಿಕೆಟ್ ಘೋಷಣೆಯ ಬಳಿಕ ಕ್ಷೇತ್ರದಲ್ಲಿ ಮಾಯವಾಗಿ ಬಿಜೆಪಿಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಾರಿ ಕಳೆದ ಬಾರಿಯ ಸೋಲಿಗೆ ಪ್ರತೀಕಾರ ಎಂಬಂತೆ ಮಹದೇವಪ್ಪ ಈಗಾಗಲೇ ತಮ್ಮ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕೆಲಸಗಳನ್ನು ಜನರ ಮುಂದೆ ಇಡುತ್ತಾ ಮತದಾರ ಮನಸ್ಸನ್ನು ಸೆಳೆಯುತ್ತಿದ್ದಾರೆ. ಒಂದೆಡೆ ಅಭಿವೃದ್ದಿಯ ಕೆಲಸ ಜೊತೆ ಅನುಕಂಪದ ಅಲೆಯು ಮಹದೇವಪ್ಪ ಕೈಹಿಡಿಯುವ ಸಾಧ್ಯತೆಯೂ ಇದೆ ಎಂದು ಕ್ಷೇತ್ರದ ಮತದಾರ ಪ್ರಭುಗಳು ಮಾತನಾಡುತ್ತಿದ್ದಾರೆ.
ಕಳೆದ ಬಾರಿ ಕೆಲ ತಪ್ಪಿನಿಂದಾಗಿ ಮಹದೇವಪ್ಪ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಈ ಬಾರಿ ಕ್ಷೇತ್ರದ ಜನರು ಮಹದೇವಪ್ಪ ಕೈ ಬಲ ಪಡಿಸುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಹದೇವಪ್ಪ ಎಲ್ಲಾ ಸಮುದಾಯದ ನಾಯಕರನ್ನು ಬೇಟಿ ಮಾಡಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಹಾಲಿ ಶಾಸಕ ಅಶ್ವಿನಿ ಈಗಾಗಲೇ ಕ್ಷೇತ್ರದಲ್ಲಿ ಬಿಡುಬಿಟ್ಟು ಪ್ರಚಾರ ಕಾರ್ಯ ಹಾಗೂ ಸಭೆಗಳಲ್ಲಿ ಜನರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
೫ ವರ್ಷಗಳಲ್ಲಿ ಕ್ಷೇತದ ಮತದಾರನ ಮನಸ್ಸು ಅರಿತು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಜನರು ನನ್ನನೆ ಬೆಂಬಲಿಸುತ್ತಾರೆ. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಯಶಸ್ವಿಯಾಗಿದೆ ಹಾಗಾಗಿ ಗೆಲುವು ನನ್ನದೇ ಎಂದು ಅಶ್ವಿನ್ ಕುಮಾರ್ ಸಭೆಗಳಲ್ಲಿ ಜನರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಸರಳ ಸಜ್ಜನಿಕೆಯ ಶಾಸಕ ಎಂದೇ ಗುರುತಿಸಿಕೊಂಡಿರುವ ಅಶ್ವಿನ್ ಎರಡನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಬಯಸಿ ತಮ್ಮ ವೈದ್ಯಕೀಯ ವೃತ್ತಿಗೆ ರಾಜೀನಾಮೆ ನೀಡಿರುವ ಡಾಕ್ಟರ್ ರೇವಣ್ಣ, ನೆನ್ನೆ ಇನ್ನೂ ಅಧಿಕೃತವಾಗಿ ಬಿಜೆಪಿ ಸೇರುವ ಮೂಲಕ ಟಿಕೆಟ್ ಗೆ ಇನ್ನೂ ಹತ್ತಿರವಾಗಿದ್ದಾರೆ. ಕ್ಷೇತ್ರದ್ಯಾಂತ ತನ್ನ ವೈದ್ಯಕೀಯ ವೃತ್ತಿಯಲ್ಲಿ ಹೆಸರು ಮಾಡಿರುವ ರೇವಣ್ಣ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಸರಳ ಹಾಗೂ ತಮ್ಮ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದು, ತಮ್ಮ ಒಳ್ಳೆಯ ಗುಣಕ್ಕೆ ಹಾಗೂ ಹೊಸ ಮುಖಕ್ಕೆ ಜನರು ಮತ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಬಿಜೆಪಿ ಕಾರ್ಯಕರ್ತರು ಕೂಡ ಈ ಬಾರಿ ಶತಯಾಗತಾಯ ಕಮಲ ಅರಳಿಸಲು ಅಭ್ಯರ್ಥಿ ಘೋಷಣೆಗೆ ಕಾದು ಕುಳಿತಿದ್ದಾರೆ.
ಈ ಕ್ಷೇತ್ರದಲ್ಲಿ ಈವರೆಗೂ 15 ಚುನಾವಣೆ ಆಗಿದ್ದು, 8 ಬಾರಿ ಕಾಂಗ್ರೆಸ್ , 3 ಬಾರಿ ಜನತಾ ಪಕ್ಷ, 2 ಬಾರಿ ಜೆಡಿಎಸ್ ಹಾಗೂ ತಲಾ ಒಂದೊಂದು ಬಾರಿ ಜನತಾದಳ, ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಬಾರಿ ಜೆಡಿಎಸ್ ನ ಅಶ್ವಿನ್ ಕುಮಾರ್ 83,929 ವೋಟ್, ಕಾಂಗ್ರೆಸ್ ನಿಂದ ಮಹದೇವಪ್ಪ 55,451 ವೋಟ್,ಬಿಜೆಪಿಯ ಶಂಕರ್ 11,812 ಮತಗಳನ್ನು ಪಡೆದಿದ್ದರು. ಅಶ್ವಿನ್ ಕುಮಾರ್ 28,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು
ಒಟ್ಟು ಮತದಾರ ಸಂಖ್ಯೆ – 2,02,756 ಪುರುಷ ಮತದಾರರು – 1,00,394 ಮಹಿಳೆ ಮತದಾರರು – 1,02,357 ಒಟ್ಟು ಮತಗಟ್ಟೆಗಳು – 227
ಆನಂದ್ ಕೆ.ಎಸ್