ಹೆಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದ ಮಧ್ಯ ಭಾಗದಲ್ಲಿ ಸುಮಾರು ಒಂದೂವರೆ ಕಿ.ಮೀ ಗೂ ಹೆಚ್ಚು ದೂರ ಚಾಚಿ ಕೊಂಡು ಬಿದ್ದಿರುವ ಕಸದ ರಾಶಿಯನ್ನು ವಿಲೇವಾರಿ ಮಾಡುವಲ್ಲಿ ಗ್ರಾ.ಪಂ ಅಧಿಕಾರಿಗಳು ವಿಫಲವಾಗಿದ್ದಾರೆ.
ಗ್ರಾ.ಪಂ ನ ಕಚೇರಿಯ ಸುಮಾರು 300 ರಿಂದ 400 ಮೀಟರ್ ದೂರದಲ್ಲಿಯೇ ಕಳೆದ ಒಂದೂವರೆ ವರ್ಷದಿಂದ ಬಿದ್ದಿರುವ ಕಸದ ರಾಶಿಯನ್ನು ತೆರವುಗೊಳಸದೇ ಬಿಟ್ಟಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ಜನತೆ ಬದುಕುತ್ತಿದ್ದಾರೆ.
ಪಂಚಾಯಿತಿ ಕೇಂದ್ರ ಸ್ಥಾನದಿಂದ ಪಕ್ಕದ ತೊರವಳ್ಳಿ, ಹುಲಿಕುರ, ಇಟ್ನಾ ಗ್ರಾಮದ ಮುಖ್ಯ ರಸ್ತೆಯಾಗಿ ರುವ ಈ ಸ್ಥಳದಲ್ಲಿ ದಿನ ನಿತ್ಯ ಸರಿ ಸುಮಾರು ಸಾವಿರಕ್ಕೂ ಹೆಚ್ಚು ಜನರು ತಮ್ಮ ವಿವಿಧ ಕಾರ್ಯಗಳಿಗೆ ಇದೇ ರಸ್ತೆ ಮಾರ್ಗವಾಗಿ ಹಗಲು, ರಾತ್ರಿ ವೇಳೆಯಲ್ಲಿ ತೆರಳಬೇಕಿ ರುವುದು ಅನಿವಾರ್ಯ ಗಿರುವುದರಿಂದ ಕಸದ ರಾಶಿಯ ದುರ್ವಾಸನೆ ತಾಳಲಾರದೇ ದಿನ ನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.
ಮುಂಗಾರು ಆರಂಭವಾಗಿರು ವುದರಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗಿತ್ತಿದೆ. ಅಲ್ಲದೇ ಮುಂದಿನ ಜೂ.ಜು. ತಿಂಗಳಿನಲ್ಲಿ ಎಡೆಬಿಡದೇ ಸುರಿಯುವ ಮಳೆಯಿಂದ ಕೊಳೆತ ಕಸದ ರಾಶಿಯು ಮಳೆ ಮಿಶ್ರಿತ ನೀರಿ ನೊಂದಿಗೆ ರಸ್ತೆಗೆ ಬಂದಿರುವುದರಿಂದ ಜನತೆ ಅದನ್ನೇ ತುಳಿದುಕೊಂಡು ತಿರುಗಾಡುತ್ತಿದ್ದಾರೆ.
ಕಸದ ರಾಶಿಯ ಸಮೀಪವಿರುವ ಕುಟುಂಬಸ್ಥರಿಗೆ ತೊಂದರೆ : ಕಸದ ರಾಶಿ ಮಧ್ಯೆದಲ್ಲಿಯೇ 20, 30 ಮನೆಗಳಿದ್ದು, ವಾತಾವರಣದಲ್ಲಿ ಬೀಸುವ ಗಾಳಿಯೊಂದಿಗೆ ದುರ್ವಾಸನೆ ಮನೆಯೊಳಗೆ ಬರುತ್ತಿದ್ದು, ಕಸದ ಮೇಲೆ ಇದ್ದ ನೊಣ, ಸೊಳ್ಳೆ, ಕ್ರಿಮಿ, ಕೀಟಗಳು ಮನೆಯಲ್ಲಿರುವ ತರಕಾರಿ ಹಾಗೂ ಆಹಾರದ ಮೇಲೆ ಕುಳಿತುಕೊಂಡು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರೊಂದಿಗೆ, ಮನೆಯಲ್ಲಿ ವಾಸ ಮಾಡಲು ಸಹ ಸಾಧ್ಯ ವಾಗುತ್ತಿಲ್ಲ.
ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮುಂಜಾಗ್ರತೆ ಕೈಗೊಂಡು ಹಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಆದರೆ ಗ್ರಾ.ಪಂ ತನ್ನ ಜವಾಬ್ದಾರಿಯನ್ನು ನಿಭಾಯಿಸದಿರುವುದು ಜನರಲ್ಲಿ ಬೇಸರ ಮೂಡಿಸಿದೆ.
ಪಂಚಾಯ್ತಿ ನಿಯಮದ ಪ್ರಕಾರವೇ ವ್ಯಾಪ್ತಿಯ ಎಲ್ಲಾ ಚರಂಡಿಗಳನ್ನು ಪ್ರತೀ 15 ದಿನಗಳಿಗೊಮ್ಮೆ ಬ್ಲೀಚಿಂಗ್ ಪೌಡರ್ ನೊಂದಿಗೆ ಶುಚಿತ್ವಗೊಳಿಸಿ, ರೋಗಗಳು ಹರಡದಂತೆ ತಡಗಟ್ಟುವ ನಿಯಮವಿದ್ದರೂ ಯಾವುದೇ ನಿಯಮಗಳನ್ನು ಪಾಲಿಸದೆ, ಜನರಲ್ಲಿ ರೋಗ ಹರಡುವಂತೆ ಗ್ರಾ.ಪಂ ನವರು ಮಾಡುತ್ತಿದ್ದಾರೆ.
2014 ನೇ ಹಣಕಾಸು ಯೋಜನೆಯಲ್ಲಿ ಗ್ರಾ.ಪಂನ ಕಸ ವಿಲೇವಾರಿಗಾಗಿ ಸುಮಾರು 5.30ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ವಾಹನ ಖರೀದಿಸಿದ್ದು, ಅದರ ಸದ್ಬಳಕೆಯೂ ಕೂಡ ಸಮರ್ಪಕವಾಗಿ ನಡೆಯದೇ ಸಾರ್ವಜನಿಕರ ತೆರಿಗೆಯ ದುಡ್ಡಿನೊಂದಿಗೆ ಸರ್ಕಾರದ ಸಮಯವನ್ನೂ ವ್ಯರ್ಥ ಮಾಡುತ್ತಿದ್ದಾರೆ.
ಶುಚಿತ್ವ ಕಾಪಾಡಲು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳಿಂದ ಆಶಾ ಕಾರ್ಯಕರ್ತೆಯರವರೆಗೂ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗ್ರಾಮದ ಕಸದ ಬಗ್ಗೆ ಮಹಿಳೆಯ ರಾದ ದೇವಮ್ಮಣಿ, ಚಿಕ್ಕಮ್ಮಣಿ, ನಾಗಮ್ಮ, ದೇವಮ್ಮ ಅವರು ಸಂಬಂಧಸಿದ ಇಲಾಖೆ ತಕ್ಷಣವೇ ತ್ಯಾಜ್ಯ ತೆರವುಗೊಳಿಸಬೇಕು. ಈ ಬಗ್ಗೆ ಪಿಡಿಒ ಕಾರ್ಯ ಪ್ರವೃತ್ತ ರಾಗದಿದ್ದರೆ ಕ್ರಮ ಕೈಗೊಳ್ಳುವಂತೆ ಸಿಇಒ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.