ಅಕ್ಷರಶಃ ಚುನಾವಣಾ ಸೋಲಿನ ಭಯಕ್ಕೆ ಒಳಗಾಗಿರುವ ಪ್ರಧಾನಿ ಮೋದಿಯವರು ಇಂಡಿಯಾ ಮೈತ್ರಿಕೂಟ ಗೆದ್ದರೆ ಎಲ್ಲಾ ಮೀಸಲಾತಿಯನ್ನು ಮುಸ್ಲೀಮರಿಗೆ ಕೊಡುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ಸ್ಥಾನದ ಘನತೆಯನ್ನು ಹಾಳು ಮಾಡುತ್ತಿದ್ದಾರೆ.
ಸಮಾಜದ ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಇವರು ತಾವೇ ಮುಂದೆ ನಿಂತು ಸಮುದಾಯಗಳ ನಡುವೆ ಒಡಕು ತರಲು ಹೊರಟಿರುವುದು ನಿಜಕ್ಕೂ ಆತಂಕಕಾರಿ ಸಂಗತಿ.
ದೇಶ ವಿಭಜನೆಯ ಸಂದರ್ಭದಲ್ಲಿ ಸಾಕಷ್ಟು ಮಂದಿ ಮುಸ್ಲೀಮರು ನೆರೆಯ ಪಾಕಿಸ್ತಾನಕ್ಕೆ ಹೋದರೆ, ಬಹಳಷ್ಟು ಮಂದಿ ಮುಸ್ಲೀಮರು ಭಾರತವನ್ನು ಒಪ್ಪಿ ಇಲ್ಲೇ ಉಳಿದರು.
ಬಾಬಾ ಸಾಹೇಬರು ಹೇಳುವಂತೆ, ದೇಶ ವಿಭಜನೆ ನಂತರದಲ್ಲಿ ಈ ದೇಶದ ಅಲ್ಪಸಂಖ್ಯಾತರು ಈ ದೇಶದ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ನಮ್ಮೊಂದಿಗೆ ಇರಲು ಬಯಸಿದ್ದು ಅವರನ್ನು ರಕ್ಷಣೆ ಮಾಡಿ, ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಹೇಳುತ್ತಾರೆ.
ಹೀಗಿರುವಾಗ ಪ್ರಜಾಪ್ರಭುತ್ವದಲ್ಲಿ ಜನರಿಂದ ಅಧಿಕಾರ ಪಡೆದ ಪ್ರಧಾನಿಗಳೇ ಸಮುದಾಯಗಳ ನಡುವೆ ಬಿರುಕು ಉಂಟು ಮಾಡಲು ಹೊರಟಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಇನ್ನು ದೇಶ ವಿಭಜನೆಯ ನಂತರದಲ್ಲಿ ಬಹಳಷ್ಟು ಕೋಮುವಾದಿ ಮನಸ್ಸುಗಳು ದೇಶ ವಿಭಜನೆ ಆಗಬಾರದಿತ್ತು, ಅದೊಂದು ಘೋರ ಸಂಗತಿ, ಇದಕ್ಕೆ ಗಾಂಧೀಜಿಯೇ ಕಾರಣ ಎಂದೆಲ್ಲಾ ಹೇಳುತ್ತಿರುವುದನ್ನು ನಾವು ಆಗಾಗ್ಗೆ ಕೇಳಿರುತ್ತೇವೆ.
ಆದರೆ ಇವರೆಲ್ಲಾ ಈ ದಿನ ಮುಸ್ಲೀಮರನ್ನು ಇಷ್ಟೊಂದು ದ್ವೇಷಿಸುವುದನ್ನು ನೋಡುವಾಗ, ಒಂದು ವೇಳೆ ದೇಶ ವಿಭಜನೆ ಆಗದೇ ಇದ್ದಿದ್ದರೆ, ಇವರೇನೂ ಮುಸ್ಲೀಮರನ್ನು ಪ್ರೀತಿಯಿಂದ ಕಂಡು ಬಿಡುತ್ತಿದ್ದರಾ ಎಂಬ ಅನುಮಾನ ನನ್ನನ್ನು ಕಾಡುತ್ತದೆ.
ಏನೇ ಆಗಲಿ ಭಾರತೀಯ ಪ್ರಜೆಗಳಾದ ನಾವು ಎಂದು ನಮಗೆ ತಿಳಿ ಹೇಳುವ ಸಂವಿಧಾನವನ್ನು ಮರೆತು ವರ್ತಿಸುವ ಪ್ರಧಾನಿಗಳು ಎಂದಿಗೂ ಕ್ಷಮಾರ್ಹರಲ್ಲ.!