ಮೈಸೂರು: ವಿಪ್ರ ವಕೀಲರ ಪರಿಷತ್ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ ಜಯಂತಿಗೆ ಅವಧೂತ ದತ್ತ ಪೀಠದ ವಿದ್ಯಾನಂದ ಶ್ರೀಗಳು ಚಾಲನೆ ನೀಡಿದರು.
ನಗರದ ಕೃಷ್ಣಮೂರ್ತಿ ಪುರಂನಲ್ಲಿನ ರಾಮಮಂದಿರದಲ್ಲಿ ಆಯೋಜಿಸಿದ್ದ ಮೂವರು ಆಚಾರ್ಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.
ಈ ಸಂದರ್ಭದಲ್ಲಿ ಮೂಲಕ ಅವಧೂತ ದತ್ತ ಪೀಠ ಗಣಪತಿ ಆಶ್ರಮದ ವಿದ್ಯಾನಂದ ಸ್ವಾಮಿಗಳು ಆಡಿಯೋ ಮೂಲಕ ತಮ್ಮ ಸಂದೇಶವನ್ನು ನೀಡಿದರು.
ಮೂವರು ಆಚಾರ್ಯರ ಜಯಂತಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ನಾಡಿಗೆ ಒಳ್ಳೆಯ ಸಂದೇಶ ನೀಡಿದಂತಾಗಿದೆ. ಆಚಾರ್ಯರ ವ್ಯಕ್ತಿತ್ವ ಈಗ ಭಾರತದಲ್ಲಿ ಮಾತ್ರ ಅಲ್ಲ. ವಿದೇಶದಲ್ಲೂ ಪಸರಿಸಿ,
ಆಚಾರ್ಯತ್ರಯರಿಗೆ ವಿಶೇಷ ಸ್ಥಾನ, ಗೌರವ ನೀಡಲಾಗುತ್ತಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸೋಸಲೆ ವ್ಯಾಸರಾಜ ಮಠದ ಪೀಠಾದಿಪತಿ ವಿದ್ಯಾತೀರ್ಥ ಸ್ವಾಮಿಗಳು, ಶಂಕರಾಚಾರ್ಯ ,ಮಧ್ವಾಚಾರ್ಯರು ಹಾಗು ರಾಮಾನುಜಾಚಾರ್ಯ ಈ ಮೂವರು ಮಹನೀಯರ ಸಿದ್ಧಾಂತವೂ ಒಂದೇ ಆಗಿದೆ. ಜನರಿಗೆ ಒಳಿತು ಮಾಡುವುದೇ ಮೂವರ ಸಿದ್ದಾಂತದ ಉದ್ದೇಶವಾಗಿತ್ತು ಎಂದುಹೇಳಿದರು.
ನಂತರ ಮಾತನಾಡಿದ ಮೇಲುಕೋಟೆಯ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಬ್ರಾಹ್ಮಣರು ಒಟ್ಟಾಗಿ ಸಮಾಜದ ಕೆಡುಕುಗಳ ವಿರುದ್ಧ ಹೋರಾಡಬೇಕು. ಆದರೆ ಇಂದು ನಮ್ಮಲೇ ಭಿನ್ನಾಭಿಪ್ರಾಯ ಮೂಡುತ್ತಿದೆ. ಇದು ಸರ್ವಥಾ ಸರಿಯಲ್ಲ. ಸಮಾಜದಲ್ಲಿನ ವೈರುಧ್ಯಗಳ ವಿರುದ್ದ ವಿಪ್ರ ಸಮುದಾಯ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್ ಸೇರಿದಂತೆ ವಿಪ್ರ ವಕೀಲರ
ಹಿರಿಯ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ವಿಪ್ರ ವಕೀಲರ ಪರಿಷತ್ ನ ಹಿರಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.