ಮೈಸೂರು : ಮೈಸೂರಿನ ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟು ನಿಂತಿವೆ. ಶವಪರೀಕ್ಷೆಗಾಗಿ ಬರುವ ಮೃತದೇಹಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ಶೀತಲಯಂತ್ರಗಳನ್ನ ದುರಸ್ಥುಗೊಳಿಸುವಂತೆ ಶವಾಗಾರದ ಸಿಬ್ಬಂದಿಗಳು ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲವೆಂಬ ಆರೋಪ ಕೇಳಿಬಂದಿದೆ.
ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು ಬರುವ ಸಂಭಂದಿಕರು ಶವಾಗಾರದ ದುಃಸ್ಥಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಶವಾಗಾರದ ಸಿಬ್ಬಂದಿಗಳು ದುರ್ವಾಸನೆಯನ್ನ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೋಗರುಜಿನಗಳು ಹರಡುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಶವಾಗಾರವಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ ಸೇರಿದಂತೆ ಹಲವು ಸ್ಥಳಗಳಿಂದ ಶವಪರೀಕ್ಷೆಗಾಗಿ ಶವಾಗಾರಕ್ಕೆ ಮೃತದೇಹಗಳನ್ನ ತರಲಾಗುತ್ತದೆ.
ಜೊತೆಗೆ ಅಪರಿಚಿತ ಶವಗಳನ್ನೂ ಸಹ ಇಲ್ಲಿ ಇರಿಸಲಾಗುತ್ತದೆ. ಕೆಲವೊಮ್ಮೆ ವಾರಸುದಾರರು ಇಲ್ಲದ ಕಾರಣ ಶವಪರೀಕ್ಷೆ ವಿಳಂಬವಾಗುತ್ತದೆ. ಇಂತಹ ಸಂಧರ್ಭದಲ್ಲಿ ಅನಿವಾರ್ಯವಾಗಿ ಮೃತದೇಹಗಳನ್ನ ಸಂರಕ್ಷಿಸಬೇಕಾಗುತ್ತದೆ. ಇದಕ್ಕಾಗಿ ಮೂರು ಶೀತಲ ಯಂತ್ರಗಳನ್ನ ಇಲ್ಲಿ ಅಳವಡಿಸಲಾಗಿದೆ. ಮೂರು ಶೀತಲ ಯಂತ್ರಗಳ ಪೈಕಿ ಎರಡು ಯಂತ್ರಗಳು ಕೆಟ್ಟು ನಿಂತು ತಿಂಗಳುಗಳೇ ಉರುಳಿದೆ. ಸಧ್ಯ ಕೇವಲ ಒಂದು ಯಂತ್ರ ಮಾತ್ರ ಕೆಲಸ ಮಾಡುತ್ತಿದೆ.
ಒಂದು ಯಂತ್ರದಲ್ಲಿ 6 ಮೃತದೇಹಗಳನ್ನ ಇರಿಸಬಹುದಾಗಿದೆ. ಆದ್ರೆ ಮೃತದೇಹಗಳ ಸಂಖ್ಯೆ ಹೆಚ್ಚಾದಾಗ ಎರಡು ಯಂತ್ರಗಳು ಕೈಕೊಟ್ಟ ಕಾರಣ ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೃತದೇಹಗಳ ನಿರ್ವಹಣೆ ಸಾಧ್ಯವಾಗದೆ ಕೊಳೆತು ದುರ್ವಾಸನೆ ಬೀರುವ ಹಂತ ತಲುಪುತ್ತಿದೆ. ಶವಾಗಾರದ ಸಿಬ್ಬಂದಿಗಳು ಈಗಾಗಲೇ ಜನವರಿ ತಿಂಗಳಲ್ಲಿ ಶೀತಲ ಯಂತ್ರಗಳನ್ನ ದುರಸ್ಥುಗೊಳಿಸುವಂತೆ ಪತ್ರ ಬರೆದಿದ್ದಾರೆ.
ಟಪಾಲು ಸೆಕ್ಷನ್ ನಲ್ಲಿರುವ ಗಂಗಾಧರ್ ಎಂಬಾತ ಡೀನ್ ರವರಿಗೆ ತಲುಪಿಸದೆ ನಿರ್ಲಕ್ಷಿಸುತ್ತಿದ್ದಾನೆಂದು ಶವಾಗಾರದ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ. ಮೃತದೇಹಗಳಿಗೂ ಒಂದು ಗೌರವ ಇದೆ. ಆದ್ರೆ ಇಲ್ಲಿ ಮೃತದೇಹಗಳನ್ನ ಕಸದ ರಾಶಿಯಂತೆ ಒಂದರ ಮೇಲೆ ಒಂದನ್ನ ಇರಿಸಿ ಅಗೌರವ ಸೂಚಿಸಲಾಗುತ್ತಿದೆ. ಒಂದೇ ಯಂತ್ರದಲ್ಲಿ ಕಸ ತುಂಬಿದಂತೆ ಮೃತದೇಹಗಳನ್ನ ಇರಿಸಲಾಗುತ್ತಿದೆ. ಕೆಟ್ಟುನಿಂತ ಶೀತಲ ಯಂತ್ರಗಳಿಂದಾಗಿ ಮೃತದೇಹಗಳನ್ನ ಸೂಕ್ತವಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೆ ದುರ್ವಾಸನೆ ಬೀರುವ ಹಂತ ತಲುಪಿದೆ. ಶವಗಳಿಗೆ ಮುಕ್ತಿನೀಡಲು ಬರುವ ಸಂಭಂಧಿಕರು ಇಲ್ಲಿಗೆ ಬಂದು ದುರ್ವಾಸನೆಯಿಂದ ರೋಗಗಳನ್ನ ಅಂಟಿಸಿಕೊಂಡು ಹೋಗುವಂತಾಗುತ್ತಿದೆ.