ಮೈಸೂರು: ದೇಶದಾದ್ಯಂತ ತೆರೆ ಕಾಣುತ್ತಿರುವ ‘ಮೈದಾನ್’ ಬಾಲಿವುಡ್ ಚಿತ್ರದ ಬಿಡುಗಡೆಗೆ ಮೈಸೂರಿನ 1 ನೇ ಜೆಎಂಎಫ್ ನ್ಯಾಯಾಲಯ ತಡೆ ಹಿಡಿದು ಆದೇಶ ಹೊರಡಿಸಿದೆ ಎಂದು ಮೈಸೂರಿನ ಕಥೆಗಾರ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನ 1ನೇ ಜೆಎಂಎಫ್ ನ್ಯಾಯಾಲಯದಲ್ಲಿ ನನ್ನ ಕಥೆಯನ್ನು ನಕಲು ಮಾಡಿದ್ದಾರೆಂದು ದೂರು ದಾಖಲಿಸಿದ್ದೆ, ಇದರ ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ಹೊರಡಿಸಿ, ಮುಂದಿನ ವಿಚಾರಣೆಯನ್ನು ಎ.24ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ ಎಂದು ಹೇಳಿದರು.
ಅಮಿರ್ ಖಾನ್ ಅವರಿಗಾಗಿ ಈ ಕಥೆ ಬರೆದಿದ್ದು, ದೇಶದ ಪುಟ್ಬಾಲ್ ಆಟದ ಇತಿಹಾಸವನ್ನು ತಿಳಿಸುವ ಕಥೆಯಾಗಿದೆ. ಇದನ್ನು 2019 ರಲ್ಲಿಯೇ ಮುಂಬೈ ನಲ್ಲಿ ‘ ಪಾದಕಂಡುಕ’ ಎಂಬ ಸಂಸ್ಕೃತದ ಹೆಸರಿನಲ್ಲಿ ಚಿತ್ರಕಥೆ ನೊಂದಾಯಿಸಿದ್ದೇನೆ. ಅಂದು ಅಮಿರ್ ಖಾನ್ ಅವರಿಗೆ ಕಥೆ ತಿಳಿಸಿ ಚಿತ್ರ ಮಾಡುವ ಇಂಗಿತ ವ್ಯಕ್ತಪಡಿಸಿದ ಸಹಾಯಕ ನಿರ್ದೇಶಕ ಸುಖದಾಸ್ ಸುರ್ಯವಂಶಿಯವರು ನನ್ನನ್ನು ಪರಿಚಯವಾಗಿ ಕಥೆ ಮಾಹಿತಿ ಪಡೆದುಕೊಂಡಿದ್ದರು.
ಈಗ ಬಿಡುಗಡೆಯಾಗುತ್ತಿರುವ ಬಾಲಿವುಡ್ ನ ಅಜದೇವಗನ್ ಅವರ ನಾಯಕ ನಟನೆಯ ‘ ಮೈದಾನ್’ ಚಿತ್ರದ ಸಂಪೂರ್ಣ ಟೀಸರ್ ನನ್ನ ಚಿತ್ರದ ಪಾದ ಕಂಡುಕವನ್ನೇ ಹೊಲುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಥೆಯ ಕೃತಿ ಚೌರ್ಯವನ್ನು ಮೈದಾನ್ ಚಿತ್ರದ ನಿರ್ದೇಶಕ, ಕಥೆಗಾರ ಹಾಗೂ ನಿರ್ಮಾಪಕರು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಮೈದಾನ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ಹೊರಡಿಸಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ತಾವು ಕಾನೂನು ಹೋರಾಟ ಮಾಡಲಿದ್ದು, ನನ್ನ ಕಥೆಯನ್ನು ನನ್ನ ಅನುಮತಿ ಇಲ್ಲದೆ ಬಳಕೆ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ, ಅಮಿರ್ ಖಾನ್ ಅವರ ಮೇಲೆ ಕಥೆ ರೂಪಿಸಿದ್ದು, ಇಲ್ಲಿ ನಾಯಕ ನಟನನ್ನು ಬೇರೆ ಬಳಸಿರುವುದು ಸಹ ನನಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ನಾನು ಈ ಹೋರಾಟಕ್ಕೆ ಮುಂದಾಗಿರುವುದಾಗಿ ಹೇಳಿದರು.