ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೇಗಾದ್ರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಕಂಟೆಸ್ಟ್ ಮಾಡುತ್ತಿದ್ದು, ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಮಂಡ್ಯದಲ್ಲಿ ಜೆಡಿಎಸ್ನಿಂದ ಖುದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುತ್ತಿದ್ದಾರೆ.
ಇನ್ನು, ಸಂಸದೆ ಸುಮಲತಾ ಅಂಬರೀಶ್ ಕೂಡ ಮಂಡ್ಯದ ಜನರಿಗೆ ನೋಯಿಸೋ ತೀರ್ಮಾನ ಮಾಡಲ್ಲ. ನಾನು ಮಂಡ್ಯದಿಂದ ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಪಣತೊಟ್ಟಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆಪಿ ನಗರದಲ್ಲಿರೋ ಸಂಸದೆ ಸುಮಲತಾ ಅಂಬರೀಶ್ ಅವರ ಮನೆಗೆ ಭೇಟಿ ನೀಡಿದ್ದಾರೆ.
ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುಮಲತಾ ಅಂಬರೀಶ್ ಮಾತಾಡಿದ್ದಾರೆ. ಇಬ್ಬರ ಮಧ್ಯೆ ಆರೋಗ್ಯಕರ ಚರ್ಚೆ ನಡೆದಿದೆ. ಭಿನ್ನಾಭಿಪ್ರಾಯ ಇತ್ತು, ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಲಹಿತೈಷಿಗಳ ಒಪ್ಪಿಗೆ ಪಡೆಯದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ. ಏಪ್ರಿಲ್ 3ರಂದು ನನ್ನೊಂದಿಗೆ ದರ್ಶನ್, ಅಭಿಷೇಕ್ ಇರಲಿದ್ದಾರೆ. ಅವರೊಂದಿಗೆ ಚರ್ಚಿಸಿ ನನ್ನ ತೀರ್ಮಾನ ತಿಳಿಸುತ್ತೇನೆ. ಮಂಡ್ಯದ ಜನರಿಗೆ ಒಳ್ಳೆಯದು ಆಗೋ ತೀರ್ಮಾನ ಮಾಡುತ್ತೇನೆ. ನನ್ನ ಮಗ ಅಭಿಷೇಕ್ ರಾಜಕೀಯಕ್ಕೆ ಬಂದ್ರೆ, ನಾನು ಚುನಾವಣೆಗೆ ನಿಲ್ಲಲ್ಲ. ಅಭಿಷೇಕ್ ರಾಜಕೀಯಕ್ಕೆ ಬಂದ್ರೆ ನಾನು ಮನೆಯಲ್ಲೇ ಇರುತ್ತೇನೆ, ಮನೆಯಲ್ಲಿ ಯಾರಾದ್ರೂ ಒಬ್ಬರು ರಾಜಕೀಯದಲ್ಲಿ ಇರಬೇಕು. ನನ್ನ ಸ್ಪರ್ಧೆ ಬಗ್ಗೆ ಹೆಚ್ಡಿಕೆ ಬಳಿ ಏನು ಚರ್ಚೆ ಮಾಡಿಲ್ಲ ಎಂದರು.