ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ತನ್ನತ್ತ ಸೆಳೆಯುವ ಕಾಂಗ್ರೆಸ್ ತಂತ್ರ ಫಲಿಸಿದೆ ಎಂದು ರಾಜಕೀಯ ಪಡಶಾಲೆಯಲ್ಲಿ ಚರ್ಚೆಗಳು ಜೋರಾಗಿದೆ.
ಅಳಿಯನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವ ಶ್ರೀನಿವಾಸ್ ಪ್ರಸಾದ್ ಪ್ರಯತ್ನ ವಿಫಲವಾಗಿದ್ದು, ಹೀಗಾಗಿ ಪಕ್ಷದ ನಡೆಗೆ ಪ್ರಸಾದ್ ಬೇಸರಗೊಂಡಿದ್ದಾರೆ. ಮೈಸೂರು, ಚಾಮರಾಜನಗರ ಕ್ಷೇತ್ರ ಗೆಲ್ಲಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಇದನ್ನೇ ಬಂಡವಾಳ ಮಾಡಿಕೊಂಡು ಪ್ರಸಾದ್ ಬೆಂಬಲ ಕೋರಲು ಯತ್ನ ನಡೆದಿದೆ.
ಟಿಕೆಟ್ ನೀಡದಿದ್ದರೂ ಪರವಾಗಿಲ್ಲ. ಸೌಜನ್ಯಕ್ಕಾದರೂ ಬಿಜೆಪಿ ನಾಯಕರು ನನಗೆ ಕರೆ ಮಾಡಿ ಮಾತನಾಡಬೇಕಿತ್ತು ಎಂದು ಆಪ್ತರ ಬಳಿ ಪಕ್ಷದ ನಡೆಗೆ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ಇದೇ ಬೇಸರದಲ್ಲಿರುವ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರಿಸಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಮಗನ ಗೆಲುವಿಗಾಗಿ ಸಚಿವ ಮಹದೇವಪ್ಪ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಭೇಟಿ ನೀಡಿ ಬೆಂಬಲ ಕೋರಿದ್ದಾರೆ.