ಚಾಮರಾಜನಗರ : ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ಹೊಸೂರು ಗ್ರಾಮದಲ್ಲಿ ಹಾಡಹಗಲೇ ಕಾಡಾನೆಗಳು ಕಬ್ಬು-ಬಾಳೆ ತೋಟಕ್ಕೆ ನುಗ್ಗಿವೆ. ಈ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ. ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಅರಣ್ಯದಲ್ಲಿ ವಾಸವಾಗಿರುವ ಕಾಡಾನೆಗಳು ಕಳೆದ ಕೆಲವು ತಿಂಗಳಿಂದ ಆಹಾರ, ನೀರು ಅರಸಿ ಕಾಡಿನಿಂದ ಹೊರಬರುತ್ತಿದ್ದು, ಆಗಾಗ ಕೃಷಿ ಜಮೀನುಗಳಿಗೆ ನುಗ್ಗಿ ಕೃಷಿ ಬೆಳೆಗಳಿಗೆ ಹಾನಿ ಮಾಡುತ್ತಿವೆ.
ತಾಳವಾಡಿ ಅರಣ್ಯ ವ್ಯಾಪ್ತಿಯ ಹೊಸೂರು ಗ್ರಾಮದ ಅಕ್ರಮ್ ಎಂಬುವವರ ಬಾಳೆ ತೋಟಕ್ಕೆ ಶನಿವಾರ ಕಾಡಾನೆಗಳು ನುಗ್ಗಿವೆ. ಇದರಿಂದ ಗಾಬರಿಗೊಂಡ ರೈತರು ಆನೆಗಳನ್ನು ಕಾಡಿಗೆ ಓಡಿಸಲು ಹಲವು ಗಂಟೆಗಳ ಕಾಲ ಹರಸಾಹಸ ಪಟ್ಟರು. ಕಾಡಾನೆಗಳು ಹಗಲು ಹೊತ್ತಿನಲ್ಲಿ ಕೃಷಿ ಜಮೀನುಗಳಿಗೆ ನುಗ್ಗುತ್ತಿರುವ ಘಟನೆಗಳಿಂದ ತಾಳವಾಡಿ ಭಾಗದ ಜನರು ಭಯಭೀತರಾಗಿದ್ದಾರೆ.