ಆನಂದ್.ಕೆ.ಎಸ್
ಮೈಸೂರು : ಸಚಿವ ಹೆಚ್.ಸಿ ಮಹದೇವಪ್ಪ ತನ್ನ ಮಗ ಸುನಿಲ್ ಬೋಸ್ ಗೆ ಚಾಮರಾಜನಗರ ಕ್ಷೇತ್ರದ ಟಿಕೆಟ್ ಕೊಡಿಸಲು ಶತಾಯ ಗತಾಯ ಪಣ ತೊಟ್ಟಿದ್ದಾರೆ. ಕಳೆದ ಎರಡು ಬಾರಿ ವಿಧಾನಸಭಾ ಟಿಕೆಟ್ ಮಿಸ್ ಆಗಿದ್ದು ಈ ಬಾರಿ ಲೋಕಸಭಾ ಟಿಕೆಟ್ ಕೊಡಿಸಿಯೆ ಸಿದ್ದ ಎಂದು ಹಠಕ್ಕೆ ಬಿದ್ದಿದ್ದಾರೆ.
ಈ ಹಿನ್ನಲೆಯಲ್ಲಿ ಪಕ್ಷದ ಹೈ ಕಮಾಂಡ್ ಹಾಗೂ ಹಿರಿಯ ನಾಯಕರ ಮಾತಿಗೂ ಸೆಡ್ಡು ಹೊಡೆದು ನಾನು ಯಾವುದೇ ಕಾರಣಕ್ಕೂ ಲೋಕಸಭೆಗೆ ನಿಲ್ಲಲ. ನನ್ನ ಮಗನಿಗೆ ಟಿಕೆಟ್ ಕೊಡಿ ಗೆಲ್ಲಿಸುವ ಜವಾಬ್ದಾರಿ ನನಗಿರಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ತನ್ನ ಮಗನಿಗೆ ಟಿಕೆಟ್ ಕೊಡಿಸುವ ಸಲುವಾಗಿ ಈಗಾಗಲೇ ಸಿಎಂ ಹಾಗೂ ಖರ್ಗೆ ಬಳಿ ಮಹದೇವಪ್ಪ ಮಾತುಕತೆ ನಡೆಸಿದ್ದಾರೆ. ಪಕ್ಷದ ವರಿಷ್ಠರು ಪಕ್ಷದ ಹಿತದೃಷ್ಟಿಯಿಂದ ನೀವೇ ಚುನಾವಣೆಗೆ ನಿಲ್ಲಿ ಎಂದು ಹೇಳಿದರು ಮಹದೇವಪ್ಪ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ.
ಈ ಬಾರಿ ಕರ್ನಾಟಕದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು 28 ಕ್ಷೇತ್ರಗಳ ಪೈಕಿ ಒಂದು ಸ್ಥಾನವನ್ನು ಗೆದ್ದು ಮಕಾಡೆ ಮಲಗಿತ್ತು. ಕಾಲ ಬದಲಾದಂತೆ ಈ ಬಾರಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಸುಮಾರು 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯೇ ಇಲ್ಲದಂತಾಗಿದೆ. ಅದಕ್ಕೆ ಸಚಿವರನ್ನು ಕಣಕ್ಕಿಳಿಸುವ ಯೋಜನೆಯಲ್ಲಿ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಚಿಂತನೆಯಲ್ಲಿತ್ತು. ಕೆಲ ಸಚಿವರು ನೇರವಾಗಿಯೇ ನಾವು ಲೋಕಸಭೆಗೆ ಸ್ಪರ್ಧೆ ಮಾಡಲ್ಲ ಎನ್ನುವ ಮೂಲಕ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ.
ಇತ್ತ ಸಚಿವ ಮಹದೇವಪ್ಪ ಮಾತ್ರ ಟಿಕೆಟ್ ಬೇಕು ಆದರೆ ನನಗೆ ಬೇಡ ನನ್ನ ಮಗನಿಗೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಪಕ್ಷ ಹಾಗೂ ಪುತ್ರ ವಾತ್ಸಲ್ಯದ ನಡುವೆ ಅಡಕತ್ತರಿಯಲ್ಲಿ ಮಹದೇವಪ್ಪ ಸಿಲುಕಿದ್ದಾರೆ.
ಈಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಚಾಮರಾಜನಗರ ಕ್ಷೇತ್ರಕ್ಕೆ ಇನ್ನೂ ಸಚಿವ ಮಹದೇವಪ್ಪ ಮನವೊಲಿಸುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಬಾರಿ ಬಿಜೆಪಿಯಿಂದ ಗೆದ್ದು ಬೀಗಿದ್ದ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಈ ಬಾರಿ ಚುನಾವಣೆ ನಿಲ್ಲಲ್ಲ ಎಂದಿದ್ದಾರೆ. ಅವರ ಬದಲು ಅವರ ಅಳಿಯ ಮೋಹನ್ ಗೆ ಬಿಜೆಪಿ ಮಣೆ ಹಾಕುವ ಸಾಧ್ಯತೆಯಿದೆ. ಕಾಂಗ್ರೆಸ್ ಬಹುತೇಕ ಸಚಿವ ಮಹದೇವಪ್ಪ ಅಥವಾ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ನೀಡುವುದು ಖಚಿತವಾಗಿದೆ.
ಸುನಿಲ್ ಬೋಸ್ ಹೊರತು ಪಡಿಸಿ ಮಾಜಿ ಶಾಸಕ ನಂಜುಂಡಸ್ವಾಮಿ, ಕೂಡ ಕೈ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ. ಇತ್ತ ಬಿಜೆಪಿಯಲ್ಲಿ ಬಾಲರಾಜ್ ಕೂಡ ಟಿಕೆಟ್ ಗೆ ಪೈಪೋಟಿ ನಡೆಸಿದ್ದಾರೆ.ಒಟ್ಟಾರೆಯಾಗಿ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ನೇರಾನೇರ ಏರ್ಪಟ್ಟಿದ್ದು ಅಭ್ಯರ್ಥಿ ಆಯ್ಕೆ ಬಳಿಕ ಕಣ ಮತ್ತಷ್ಟು ರಂಗೆರುವುದರಲ್ಲಿ ಯಾವುದೇ ಸಂಶಯವಿಲ್ಲ.