ಚಾಮರಾಜನಗರ : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಕುತಂತ್ರ ಹಾಗೂ ತಮಿಳುನಾಡು ಸರ್ಕಾರದ ಹಠತನ ಧೊರಣೆಯನ್ನು ಖಂಡಿಸಿ ಚಾಮರಾಜನಗರದಲ್ಲಿ 176 ನೇ ದಿನ ಕನ್ನಡ ಚಳವಳಿಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರಿ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಚಳವಳಿಗಾರರು ಕೇಂದ್ರ ಸರ್ಕಾರವು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮದ್ಯ ಪ್ರವೇಶಿಸದೇ ಇರುವುದನ್ನು ಖಂಡಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಮಳೆ ಇಲ್ಲದೆ, ಕೆರೆ ಕಟ್ಟೆಗಳು ಬರಿದಾಗಿದ್ದು, ಜಲಾಶಯಗಳು ಬರಿದಾಗುತ್ತಿದೆ. ಇಲ್ಲಿನ ರೈತರುಗಳು ಕೃಷಿ ಮಾಡಲು ತೊಂದರೆಯಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ತಮಿಳುನಾಡು ರಾಜ್ಯದ ಹಠಮಾರಿತನದ ದೊರಣೆಯಿಂದಾಗಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕ ರಾಜ್ಯಕ್ಕೆ ಮಾರಕವಾದ ಆದೇಶಗಳನ್ನು ನೀಡುತ್ತಿದೆ ಎಂದು ಆರೋಪಿಸಲಾಯಿತು.
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಸೇರಿದಂತೆ ಹಲವಾರು ಕನ್ನಡ ಚಳವಳಿಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.