ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿರುವ ಬಳ್ಳಾರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಕಾವು ರಂಗೇರುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಪಕ್ಷಗಳ ಸಾಧನೆ ಪಟ್ಟಿ ಹಿಡಿದು ಆಯಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾಯಕರು, ಮುಖಂಡರು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಶಾಸಕರ ಪುತ್ರಿ, ಸಚಿವರ ಸಹೋದರ, ಮಾಜಿ ಸಂಸದರು, ಕಾಂಗ್ರೆಸ್ ನಾಯಕರು ಸೇರಿ ಅನೇಕರು ಟಿಕೆಟ್‍ಗಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇನ್ನಿಲ್ಲದ ಲಾಬಿಯಲ್ಲಿ ನಿರತರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹಾಲಿ ಶಾಸಕ ಈ ತುಕಾರಾಂ ಅವರು ಹೊಸ ದಾಳ ಉರುಳಿಸಿದ್ದು, ನನಗೆ ಹೈಕಮಾಂಡ್ ಟಿಕೆಟ್ ಕೊಡುವುದಾಗಿ ಹೇಳಿದೆ. ಆದರೆ ನಾನು, ನನಗೆ ಬೇಡ ನನ್ನ ಮಗಳಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿರುವೆ. ಅಲ್ಲದೆ ಕಾಂಗ್ರೆಸ್ ನಡೆಸಿದ ಪ್ರತಿ ಸಮೀಕ್ಷೆಯಲ್ಲಿ ನನ್ನ ಪರವಾದ ಒಲವು ಮೂಡಿದೆ, ಹೀಗಾಗಿ ನನಗೆ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಿದೆ ಎಂದಿದ್ದಾರೆ
ಮಾಜಿ ಲೋಕಸಭಾ ಸದಸ್ಯ ಉಗ್ರಪ್ಪ (Ugrappa) ಅವರು ತುಕಾರಾಂ ಅವರ ಈ ಹೇಳಿಕೆಗೆ ಕೆಂಡಾಮಂಡಲ ಆಗಿದ್ದಾರೆ. ಹೈಕಮಾಂಡ್ ನನಗೆ ಟಿಕೆಟ್ ನಿರಾಕರಿಸಲು ಏನು ಕಾರಣ ಇದೆ? ನಾನು ಅಸಮರ್ಥನಾ? ಅಥವಾ ನಾನು ಆಕ್ಟಿವ್ ಆಗಿಲ್ಲವಾ? ನಾನು ಪಾರ್ಲಿಮೆಂಟ್ ಅಲ್ಲಿ ಪರ್ಫಾರ್ಮೆನ್ಸ್ ಕೊಟ್ಟಿಲ್ಲವಾ? ಯಾವುದಕ್ಕೆ ಟಿಕೆಟ್ ನಿರಾಕರಿಸುತ್ತಾರೆ? ಕಾರಣ ಕೊಡಿ ಎಂದು ಪ್ರಶ್ನಿಸಿದ್ದಾರೆ.