ಚಾಮರಾಜನಗರ : ಆಕಸ್ಮಿಕ ಬೆಂಕಿ ಅನಾಹುತಕ್ಕೆ ಜೋಳದ ಕಡ್ಡಿ ಮೆದೆ ಹಾಗೂ ಗಡಿಸಲು ಸಂಪೂರ್ಣವಾಗಿ ಭಸ್ಮವಾಗಿದ್ದಲ್ಲದೆ 4 ದಿನಗಳ ಆಕಳುವೊಂದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ದೊಡ್ಡರಾಯಪೇಟೆ ಗ್ರಾಮದ ನೀರಿನ ಟ್ಯಾಂಕ್ ಬಳಿ ಇರುವ ಜಮೀನಿನೊಂದರಲ್ಲಿ ಚಿಕ್ಕರಂಗಯ್ಯ ಬಿನ್ ಮಲ್ಲಯ್ಯ, ಗಂಗಾಧರ್ ಬಿನ್ ಸಿದ್ದಯ್ಯರವರಿಗೆ ಸೇರಿದ ಶೆಡ್ ಮತ್ತು ಜೋಳದ ಕಡ್ಡಿ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ 2 ಲಕ್ಷ ರೂ ನಷ್ಟವಾಗಿದೆ.
ಶನಿವಾರ ಮದ್ಯಾಹ್ನ 2.30 ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಜೋಳದ ಕಡ್ಡಿ ಮೆದೆ ಬೆಂಗಾಹುತಿಯಾದರೆ, ಶೆಡ್ ನಲ್ಲಿ ನಾಲ್ಕು ದಿನಗಳ ಕರುವೊಂದು ಬೆಂಕಿಯಲ್ಲಿ ದಹಿಸಿ ಹೋಯಿತು. ಚಾಮರಾಜನಗರದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಅನಾಹುತ ನಡೆದು ಹೋಗಿತ್ತು.
ಘಟನಾ ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೇಟಿ ನೀಡಿ ವಯಕ್ತಿಕವಾಗಿ ನೆರವು ನೀಡಿ, ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಬರವಸೆ ನೀಡಿದರು, ಕೂಡೂರು ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಮಾಜಿ ಸದಸ್ಯರು ಮತ್ತು ಮುಖಂಡರುಗಳು ಶಾಸಕರ ಬೇಟಿಯ ವೇಳೆ ಹಾಜರಿದ್ದರು.