ಚಾಮರಾಜನಗರ : ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿಯನ್ನು ತಡೆಯೊಡ್ಡಿದ ಕಾಡಾನೆಯೊಂದು ಕಬ್ಬು ವಸೂಲಿ ಮಾಡಿದ್ದಲ್ಲದೆ ಲಾರಿಯನ್ನು ಪ್ರದಕ್ಷಣೆ ಹಾಕಿದ ವೇಳೆ ಲಾರಿಯಲ್ಲಿದ್ದ ಚಾಲಕ ಮತ್ತು ಸಹಾಯಕರು ಲಾರಿಯಿಂದ ಕೆಳಗಿಳಿದು ಸುತ್ತು ಹೊಡೆದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಬಣ್ಣಾರಿ ಬಳಿ ನಡೆದಿದೆ.
ಎಂದಿನಂತೆ ರೈತರಿಂದ ಕಬ್ಬನ್ನು ಕಟಾವು ಮಾಡಿಸಿಕೊಂಡು ಲಾರಿಯಲ್ಲಿ ತುಂಬಿಕೊಂಡು ಸತ್ಯಮಂಗಲಂ ನಲ್ಲಿರುವ ಸಕ್ಕರೆ ಕಾರ್ಖಾನೆಗೆ ತೆರಳುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಕಾಡಾನೆಯೊಂದು ಸೊಡಿಲಿನಿಂದ ಕಬ್ಬನ್ನು ಕಿತ್ತು ತಿನ್ನಲಾರಂಭಿಸಿತು. ಬಳಿಕ ಲಾರಿಯನ್ನು ಒಂದು ಸುತ್ತು ಬರುತ್ತಿದ್ದಂತೆ ಲಾರಿಯಲ್ಲಿದ್ದ ಚಾಲಕ ಮತ್ತು ಸಹಾಯಕ ಲಾರಿಯಿಂದ ಇಳಿದು ಬದುಕಿದೆಯಾ ಬಡ ಜೀವವೇ ಎಂದು ಕಾಡಾನೆಯಿಂದ ತಪ್ಪಿಸಿಕೊಳ್ಳಲು ಸುತ್ತು ಹೊಡೆದು ಮತ್ತೇ ಲಾರಿ ಹತ್ತಿ ಪ್ರಾಣ ಉಳಿಸಿಕೊಂಡ ಘಟನೆ ನಡೆದಿದ್ದು, ಈ ದೃಶ್ಯವನ್ನು ಲಾರಿಯ ಹಿಂಬದಿಯಲ್ಲಿದ್ದ ವಾಹನ ಚಾಲಕರು ಚಿತ್ರೀಕರಣ ಮಾಡಿದ್ದು, ಇದೀಗ ಇದು ಸಖತ್ ವೈರಲ್ ಆಗುತ್ತಿದೆ.
ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ ಬಣ್ಣಾರಿ ವಲಯ, ದಿಂಬಂ ವಲಯ, ಹಾಸನೂರು ವಲಯ ಹಾಗೂ ಕರ್ನಾಟಕ ಮತ್ತು ತಮಿಳುನಾಡು ಗಡಿ ಕಾರ್ಯಾಪಾಳ್ಯಂ ವಲಯದಲ್ಲಿ ಕಾಡಾನೆಗಳು ಕಬ್ಬಿನ ರುಚಿ ನೋಡಿದ್ದರಿಂದ ಲಾರಿಯಲ್ಲಿ ಬರುವ ಕಬ್ಬಿಗಾಗಿ ಕಾದು ಲಾರಿಯನ್ನು ಅಡ್ಡಗಟ್ಟಿ ಕಬ್ಬು ವಸೂಲಿ ಮಾಡುತ್ತಿರುವ ಪ್ರಸಂಗ ಸಾಮಾನ್ಯವಾಗಿ ಬಿಟ್ಟಿದೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕಾಗಿದೆ ಎನ್ನುವುದು ಸ್ಥಳೀಯರ ೊತ್ತಾಯವಾಗಿದೆ.