ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ನ ಸಾಂಸ್ಕೃತಿಕ ಸಮಿತಿ ಜಿಲ್ಲಾಧ್ಯಕ್ಷರಾಗಿ ಮೈಸೂರಿನ ಯುವ ಉದ್ಯಮಿ, ಚಿಂತಕಿಡಾ. ಶ್ವೇತಾ ಮಡಪ್ಪಾಡಿ ಇವರನ್ನು ನೇಮಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ. ಕೆ ಶಿವಕುಮಾರ್ ಇವರ ಆದೇಶದ ಮೇರೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಜೆ. ವಿಜಯಕುಮಾರ್ ಇವರು ಈ ಆದೇಶವನ್ನು ಹೊರಡಿಸಿದ್ದಾರೆ.
ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಡಾ. ಶ್ವೇತಾ ಮಡಪ್ಪಾಡಿ ಇವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು. ಸಾಂಸ್ಕೃತಿಕವಾಗಿ ಬಹು ಸಮೃದ್ಧತೆಯನ್ನು ಹೊಂದಿರುವ ನಮ್ಮ ಸಮಾಜದ ಜನರ ಆಶಯಗಳನ್ನು ಅರಿವುದಕ್ಕಾಗಿ ಕಾಂಗ್ರೆಸ್ ಪಕ್ಷವು ಸಾಂಸ್ಕೃತಿಕ ಸಮಿತಿಯೊಂದನ್ನು ರೂಪುಗೊಳಿಸಿದೆ. ಇದಕ್ಕಾಗಿ ಬಹುಮುಖ ಪ್ರತಿಭೆ, ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟ ಸಾಧನೆಗೈದ ಯುವ ಪ್ರತಿಭೆಯಾದ ಡಾ. ಶ್ವೇತಾ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ವೇತಾ ಕರ್ನಾಟಕ ಸರಕಾರದ ‘ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ’ಯ ಮಾಜಿ ಸದಸ್ಯರು. ಭರತನಾಟ್ಯದಲ್ಲಿ ಪದವೀಧರೆ.
ಮೈಸೂರು ದಸರಾ, ಲಕ್ಕುಂಡಿ ಉತ್ಸವದಂಥ ನೂರಾರು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಮೈಸೂರಿನ ಬ್ರಾಹ್ಮೀನ್ಸ್ ಕೆಫೆಯ ಮಾಲೀಕರಾದ ಇವರು ಯಶಸ್ವಿ ಉದ್ಯಮಿಯೂ ಹೌದು. ಜಾನಪದ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮೈಸೂರು ವಿವಿ ಯಿಂದ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಜಾನಪದದಲ್ಲಿ ಪಿಎಚ್.ಡಿ ಪದವಿಯನ್ನು ಕೂಡ ಪಡೆದಿದ್ದಾರೆ.