ಬೆಂಗಳೂರು: ಜನ ಅಷ್ಟೇ ಅಲ್ಲ ಜಾನುವಾರುಗಳೂ ಕೂಡ ಸರ್ಕಾರದ ಮೇಲೆ ಶಾಪ ಹಾಕುತ್ತಿವೆ. ರಾಜ್ಯ ಸರ್ಕಾರ ಜಾನುವಾರುಗಳ ಕೋಪಕ್ಕೂ ಬಲಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಹೊಣೆ ಮರೆತು ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ತಕ್ಷಣ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ರೈತರ ಹಣ ಬಾಕಿ ಉಳಿಸಿಕೊಂಡ ಪಾಪ ಸರ್ಕಾರಕ್ಕೆ ತಗಲುತ್ತದೆ. ಹಣ ಬಿಡುಗಡೆ ಮಾಡದಿದ್ದರೆ ಜನ ಮತ್ತು ಜಾನುವಾರುಗಳೊಂದಿಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಿಎಸ್ ಯಡಿಯೂರಪ್ಪ ಅವರ ಕೃಪಾಕಟಾಕ್ಷದಿಂದ ಬಂಪರ್ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ತಿರುಗೇಟು ಕೊಟ್ಟ ವಿಜಯೇಂದ್ರ ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಬಂಪರ್ ಲಾಟರಿ ಬಗ್ಗೆ ಆವಾಗ ಗೊತ್ತಾಗತ್ತೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಜನರೇ ಉತ್ತರಿಸುತ್ತಾರೆ ಅಮಿತ್ ಶಾ ರಾಜ್ಯಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು ಅಮಿತ್ ಶಾ ಅವರು ಇದೇ ತಿಂಗಳು 10ಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ. ಲೋಕಸಭಾ ಕ್ಲಸ್ಟರ್ ಮೀಟಿಂಗ್ ಮಾಡಲಿದ್ದೇವೆ. ಚರ್ಚೆ ಮಾಡಿ, ತದನಂತರ ಲೋಕಸಭಾ ಅಭ್ಯರ್ಥಿಗಳ ಜೊತೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮಂಡ್ಯ, ಹಾಸನ ಕ್ಷೇತ್ರ ಬಿಜೆಪಿ ಉಳಿಸಿಕೊಳ್ಳತ್ತೆ ಎಂಬ ಪ್ರೀತಮ್ ಗೌಡ ಹೇಳಿಕೆಗೆ ಉತ್ತರಿಸಿದ ಅವರು, ಎಲ್ಲಾ ಕೂತು ಚರ್ಚೆ ಮಾಡುತ್ತೇವೆ. ಗೊಂದಲ ಇಲ್ಲ, ಎಲ್ಲರ ಜತೆ ಚರ್ಚಿಸಿ ಕ್ಷೇತ್ರ ಹಂಚಿಕೆ ಆಗಲಿದೆ. ಯಾರು ಯಾವ ಕ್ಷೇತ್ರಕ್ಕೆ ಅಭ್ಯರ್ಥಿ ಆಗಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡಲಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಇದು ಮನೆ ಒಳಗೆ ಕೂತು ಮಾತನಾಡುವ ವಿಷಯ ಎಂದರು.