ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನನಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಜಿಲ್ಲೆಯ ಚೇಳೂರು ಬ್ರಾಹ್ಮಣರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಬಿಜೆಪಿ ನಾಯಕರು ಟಿಕೆಟ್ ನೀಡುವ ವಿಶ್ವಾಸವಿದೆ. ಹಾಗೆಯೇ ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡರು ಸಹ ಹಸಿರು ನಿಶಾನೆ ತೋರಿದ್ದು, ಕ್ಷೇತ್ರದಲ್ಲಿ ಕೆಲಸ ಪ್ರಾರಂಭ ಮಾಡಲು ಸೂಚನೆ ನೀಡಿದ್ದಾರೆ ಎಂದಿದ್ದಾರೆ.
ಸುಧಾಕರ್ ಅಂದ್ರೆ ಅಭಿವೃದ್ಧಿ ಅಭಿವೃದ್ಧಿ ಅಂದ್ರೆ ಸುಧಾಕರ್ ಎನ್ನುವುದು ನಿಮಗೆಲ್ಲ ಗೊತ್ತಿದೆ. ನಾನು ಸಂಸದನಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದೇನೆ. ಹಾಗಾಗಿ ನಾನು ದೇವ ಮೂಲೆ ಚಾಕ್ ವೇಲ್ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ಸುಧಾಕರ್ ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು, ಈಗ ಲೋಕ ಸಮರದತ್ತ ಚಿತ್ತ ಹರಿಸಿರುವ ಸುಧಾಕರ್ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗಿ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಸ್ಪರ್ಧೆಗೆ ಅವಕಾಶ ಕೊಡುವಂತೆ ಸುಧಾಕರ್ ಮನವಿ ಮಾಡಿಕೊಂಡಿದ್ದರು. ಈಗ ಜೆಡಿಎಸ್ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿದು ಚುನಾವಣೆ ಕೆಲಸ ಆರಂಭ ಮಾಡಿದ್ದೇನೆ ಎಂದಿದ್ದಾರೆ.

