ಅಶಕ್ತ ರೋಗಿಗಳ ಪಾಲಿನ ದೇವರು, ಹೃದ್ರೋಗ ಚಿಕಿತ್ಸೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಖ್ಯಾತ ವೈದ್ಯ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಅವಧಿ ಜನವರಿ 31ಕ್ಕೆ ಕೊನೆಗೊಳ್ಳುತ್ತಿದೆ.
ತಮ್ಮ ಸುದೀರ್ಘ ವೃತ್ತಿ ಬದುಕಿನ ಬಗ್ಗೆ ಮಂಜುನಾಥ್ ಮನಬಿಚ್ಚಿ ಮಾತಾಡಿದ್ದಾರೆ. ಬೆಂಗಳೂರಲ್ಲಿ
ಸುದ್ದಿಗಾರರೊಂದಿಗೆ ಮಾತಾಡಿದ ಜಯದೇವ ಆಸ್ಪತ್ರೆ ನಿರ್ದೇಶಕರ ಡಾ. ಮಂಜುನಾಥ್ , ನಾನು ನಿರ್ದೇಶಕನಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಜಯದೇವ ಹೃದ್ರೋಗ ಆಸ್ಪತ್ರೆಯ ನೋಟವೇ ಬದಲಾಗಿದೆ. ಕಳೆದ 16 ವರ್ಷದಲ್ಲಿ ಶೇ.500ರಷ್ಟು ಪ್ರಗತಿಯನ್ನ ಸಾಧಿಸಿದೆ. 300 ಹಾಸಿಗೆ ಸಾಮರ್ಥ್ಯ ಇದ್ದ ಜಯದೇವ ಇಂದು 2000 ಸಾವಿರ ಬೆಡ್ ಸಾಮರ್ಥ್ಯ ಹೊಂದಿದೆ. ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಡ್ತಿರೋದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. 15 ವರ್ಷದಲ್ಲಿ 75 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ಕೊಟ್ಟಿದ್ದೇವೆ. 8 ಲಕ್ಷ ಆಪರೇಷನ್ಗಳು ನಡೆದಿವೆ. ರಾಜ್ಯಕ್ಕೆ ದೇಶಕ್ಕೆ 350 ಹೃದ್ರೋಗ ತಜ್ಞರನ್ನ ತರಬೇತಿ ಮಾಡಿದ್ದೇವೆ ಅಂತ ಹೇಳಿದ್ರು. ಪ್ರಾರಂಭದಲ್ಲಿ ಸೇರಿಕೊಂಡಾಗ ಈ ಸರ್ಕಾರಿ ಆಸ್ಪತ್ರೆಯನ್ನ ಪಂಚತಾರ ಖಾಸಗಿ ಆಸ್ಪತ್ರೆ ಮಟ್ಟಕ್ಕೆ ಬೆಳೆಸಿ ನಿರ್ವಹಣೆ ಮಾಡಿ ತೋರಿಸಬೇಕು ಅನ್ನೋ ಕನಸು ಹೊಂದಿದ್ದೆ. ಅದರಲ್ಲಿ ಸಂಪೂರ್ಣವಾಗಿ ನಾನು ಯಶಸ್ವಿಯಾಗಿದ್ದೇನೆ.
ಹೃದ್ರೋಗ ಚಿಕಿತ್ಸೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೇನೆ. ಮೂರು ಘೋಷವಾಕ್ಯದಡಿ ಕೆಲಸ ಮಾಡಿದ್ದೇನೆ. ಮಾನವೀಯೆತೆಗೆ ಮೊದಲ ಆದ್ಯತೆ ಎಂದು ಕೆಲಸ ಮಾಡಿದ್ದೇನೆ. ಈ ತಿಂಗಳ 31ಕ್ಕೆ ನಿವೃತಿಯಾಗ್ತಿದ್ದೇನೆ, ಅದರಲ್ಲಿ ಯಾವುದೇ ಅಸಮಾಧಾನ ಇಲ್ಲ. ಆರಂಭದದಲ್ಲಿ ಜಯದೇವ ಸೇರಿಕೊಂಡಾಗ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸಿಬ್ಬಂದಿಯನ್ನ ವಿಶ್ವಾಸಕ್ಕೆ ತಗೊಂಡು ಮೊದಲು ನಮ್ಮ ಒಂದು ದಿನದ ಸಂಬಳವನ್ನ ಸಂಸ್ಥೆಗೆ ಕೊಡುವಂತೆ ಮನವಿ ಮಾಡಿದ್ದೆ. ಅಧಿಕಾರದ ವಹಿಸಿಕೊಂಡಾಗ ಬಡವರ ಆರೋಗ್ಯ ನಿಧಿ 5 ಲಕ್ಷ ಇತ್ತು. ಇವತ್ತು 150 ಕೋಟಿ ರೂಪಾಯಿ ಠೇವಣಿ ಇದೆ. ಇದರ ಬಗ್ಗೆ ಸಂತೋಷ ಇದೆ. ಇಷ್ಟೆಲ್ಲಾ ಸಾಧನೆ ಮಾಡಿ ಹುದ್ದೆಯನ್ನ ನಾವೇ ಮುಂದುವರಿಸ್ಬೇಕೆಂದು ಹೇಳೋದು ತಪ್ಪು. ಅದು ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತೆ. ಸರ್ಕಾರದ ನಿರ್ಧಾರಕ್ಕೆ ನಾನು ಒಪ್ಪುತ್ತೇನೆ. ಅದನ್ನ ಸಂತೋಷದಿಂದಲೇ ಸ್ವೀಕಾರ ಮಾಡ್ತೇನೆ ಎಂದು ಹೇಳಿದ್ದಾರೆ.