ಮೈಸೂರು : ಕೋಟ್ಯಾಂತರ ರಾಮಭಕ್ತರ ಬಹಳ ವರ್ಷಗಳ ಕನಸು ನನಸಾಗುವ ಕ್ಷಣ ಹತ್ತಿರವಾಗ್ತಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇದೆಲ್ಲದರ ನಡುವೆ ಕರುನಾಡ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯೇ ಪ್ರತಿಷ್ಠಾಪನೆಗೆ ಆಯ್ಕೆ ಆಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಚಂಪತ್ ರಾಯ್, ಕರ್ನಾಟಕದ ಅರುಣ್ ಯೋಗಿರಾಜ್ ಅವರು 15-20 ದಿನಗಳ ಕಾಲ ಮನೆಗೆ ಕರೆ ಮಾಡದೇ ಏಕಾಗ್ರತೆಯಿಂದ ರಾಮ ಲಲ್ಲಾ ಮೂರ್ತಿಯನ್ನ ಕೆತ್ತಿದ್ದರು. ಮೂರ್ತಿ ಸುಂದರವಾಗಿ ಮೂಡಿಬಂದಿದೆ. ರಾಮಲಲ್ಲಾ ವಿಗ್ರಹ ಚಿತ್ತಾಕರ್ಷಕವಾಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಒಟ್ಟು 11 ಜನರ ಈ ಮೂರ್ತಿಯನ್ನ ಪ್ರತಿಷ್ಠಾಪಿಸಲು ಒಮ್ಮತಿಸಿದ್ದಾರೆ. ಟ್ರಸ್ಟ್ ಕಮಿಟಿಯಲ್ಲಿ 15 ರಲ್ಲಿ 11 ಸದಸ್ಯರು ಈ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಮೂರ್ತಿಯನ್ನೇ ಒಪ್ಪಿಕೊಂಡಿದ್ದಾರೆ .
ಹೀಗಾಗಿ ಜನವರಿ 22ಕ್ಕೆ ಇದೇ ಮೂರ್ತಿ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಅಂತ ಹೇಳಿದ್ರು. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳಿಗೆ ಮೂರ್ತಿ ಕೆತ್ತನೆ ಕಾಯಕ ಒಲಿದು ಬಂದಿತ್ತು. ಮೂರರಲ್ಲಿ ಒಂದು ರಾಮ ಲಲ್ಲಾ ಮೂರ್ತಿಯ ಕೆತ್ತನೆಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಅರುಣ್ ಯೋಗಿರಾಜ್ ಕೈಯಲ್ಲಿ ರಾಮ ಲಲ್ಲಾ ಮೂರ್ತಿ ಮೂಡಿಬಂದಿದೆ. ಇದೇ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿರೋದು ಕರುನಾಡ ಕೀರ್ತಿಯನ್ನ ಮತ್ತಷ್ಟು ಹೆಚ್ಚಿಸಿದೆ.