ಬೆಂಗಳೂರು : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಸರ್ಕಾರಿ ವೈದ್ಯರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗೂ ಪ್ರಾಧ್ಯಾಪಕರಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಅಳಿಯ ಡಾ.ಎನ್.ಎಸ್.ಮೋಹನ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಇದೀಗ ಚುನಾವಣಾ ಅಖಾಡಕ್ಕಿಳಿಯಲು ಲಕ್ಷಾಂತರ ರೂ. ವೇತನದ ಸರ್ಕಾರಿ ಹುದ್ದೆಯನ್ನು ತೊರೆದಿದ್ದಾರೆ
ಅವರು ಹುದ್ದೆಗೆ ಸೇರಿ ಕೇವಲ 15 ವರ್ಷಗಳಾಗಿತ್ತು. ಇನ್ನೂ ಉನ್ನತ ಹುದ್ದೆಗೇರುವ ಅವಕಾಶವಿದ್ದರೂ ಸಹ ರಾಜಕೀಯದಲ್ಲಿ ಸಕ್ರಿಯರಾಗಲು ಹುದ್ದೆಯನ್ನು ತೊರೆದಿದ್ದಾರೆ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿರುವ ಮೋಹನ್ ಅವರು, ಬಿಜೆಪಿ ವರಿಷ್ಠರು ಟಿಕೆಟ್ ನೀಡಿ ಗೆಲ್ಲಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಆರ್‍ಎಸ್‍ಎಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.
ಈಗಾಗಲೇ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಘೋಷಿಸಿದ್ದಾರೆ. ಯಾರ ಪರವೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಿಂದೆ ಅವರ ಮೊದಲನೇ ಅಳಿಯ ಹರ್ಷವರ್ಧನ್ ನಂಜನಗೂಡು ಶಾಸಕರಾಗಿದ್ದರು. ಈಗ ಎರಡನೇ ಅಳಿಯನ ಪರ ಬ್ಯಾಟಿಂಗ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ