ಬೆಂಗಳೂರು : ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದೌರ್ಜನ್ಯ ನಡೆಸಿ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂತ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ದೊಡ್ಡವರಿದ್ದಾರೆ, ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಲೋಕಸಭೆಗೆ ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ಪರ್ಧೆ ಮಾಡುತ್ತಾರೆ ಅನ್ನೋದೆಲ್ಲಾ ಸುಳ್ಳು. ನಾನಿನ್ನು ವರದಿಯನ್ನೇ ಕೊಟ್ಟಿಲ್ಲ. ನಾಲ್ಕರಂದು ದೆಹಲಿಯಲ್ಲಿ ಮೀಟಿಂಗ್ ಇದೆ. ನಾವು ಸಚಿವರನ್ನ ಸ್ಪರ್ಧೆ ಮಾಡಿ ಎಂದು ಹೇಳಿಯೇ ಇಲ್ಲ. ಎಲ್ಲಾ ಉಸ್ತುವಾರಿ ಸಚಿವರು ರಿಪೋರ್ಟ್ ಕೊಟ್ಟಿದ್ದಾರೆ. ನನ್ನ ಸಿಎಂ ಅವರನ್ನ ಹೈಕಮಾಂಡ್ ಕರೆದಿದ್ದಾರೆ. ನಾವು ಹೋಗ್ತಾ ಇದ್ದೇವೆ ಅಲ್ಲಿ ಗೈಡ್ ಲೈನ್ಸ್ ಮಾಡೋದನ್ನ ನಾವು ಫಾಲೋ ಮಾಡಿದ್ದೇವೆ. ನಾವು ಯಾವ ಸಚಿವರ ಬಳಿ ಮಾತಾಡಿಲ್ಲ ಎಂದರು.
ಪಕ್ಷ ಹೇಳಿದ್ರೆ ಎಲ್ಲರೂ ಕೇಳುತ್ತಾರೆ. 10 ರಂದು ಶಾಸಕರು ಪದಾಧಿಕಾರಿಗಳ ಜೊತೆ ಸಭೆ ಇದೆ. ಆ ಸಭೆಯಲ್ಲಿ ಸಿಎಂ ಕೂಡ ಭಾಗಿಯಾಗುತ್ತಾರೆ. ಸಚಿವರುಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ ಅವರು ರಿಪೋರ್ಟ್ ಕೊಡುತ್ತಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಕೆಲವು ಸಚಿವರು ಸ್ಪರ್ಧೆ ಮಾಡುವ ಸಂದರ್ಭ ಬರಬಹುದು ನೋಡೋಣ ಪಕ್ಷ ಏನ ತೀರ್ಮಾನ ಮಾಡುತ್ತೆ ನೋಡೋಣ ಎಂದರು.
ಇದಕ್ಕೂ ಮುನ್ನ, ಹೊಸ ವರ್ಷದ ಶುಭಾಶಯಗಳು. ಕಳೆದ ವರ್ಷ ಬರಗಾಲ ಅನುಭವಿಸಿದ್ದೇವೆ. ಈ ವರ್ಷ ಬರಗಾಲ ದೂರಾಗಲಿ, ಸಮೃದ್ಧಿ ನೆಲೆಸಲಿ ರೈತರ ಬದುಕು ಹಸನಾಗಲಿ. ವಿಪಕ್ಷವನ್ನ ಮೆಚ್ಚಿಸೋಕೆ ಆಗಲ್ಲ.ನಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡ್ತೀವಿ ಎಂದರು.