ಮೈಸೂರು : ಬೆಂಗಳೂರಿನಲ್ಲಿ ಮೊನ್ನೆ ಕನ್ನಡ ನಾಮಫಲಕ ಅಳವಡಿಸುವ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಕನ್ನಡ ಹೋರಾಟಗಾರರನ್ನು ಬಂಧನ ಮಾಡಿ ಹತ್ತಿಕ್ಕುವುದು ಸರಿಯಲ್ಲ.ಹಾಗಾಗಿ ಕೂಡಲೇ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧಚಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಪರವಾಗಿ ಹೋರಾಟ ಮಾಡುವ ಯಾವುದೇ ಕನ್ನಡ ಪರ ಚಳವಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ನೀಡುತ್ತದೆ. ಆದರೆ ಅಂತಹ ಹೋರಾಟಗಳು ಶಾಂತಿ ಮತ್ತು ಅಹಿಂಸಾತ್ಮಕವಾಗಿರಬೇಕು. ಯಾವುದೇ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯುಂಟು ಮಾಡಬಾರದು ಎಂದು ಹೇಳಿದರು.
ರಾಜ್ಯದಲ್ಲಿರುವ ಎಲ್ಲಾ ಅಂಗಡಿ, ಆಸ್ಪತ್ರೆ, ಹೋಟೆಲ್,ವ್ಯಾಪಾರಿ ಸಂಸ್ಥೆ ನಾಮಫಲಕಗಳಲ್ಲಿ ಶೇ.60 ರಷ್ಟು ಭಾಗ ಕನ್ನಡ ಭಾಷೆಯಲ್ಲೇ ಇರಬೇಕು ಎಂಬ ನೀತಿಯನ್ನು ಜಾರಿಗೆ ತರಲು ಇದರ ಅನುಷ್ಠಾನಕ್ಕೆ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಗುವುದಿ ಎಂದು ರಾಜ್ಯದ ನುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಹೇಳಿರುವುದನ್ನು ರೈತ ಸಂಘ ಸ್ವಾಗತಿಸುತ್ತದೆ ಎಂದು ಹೇಳಿದರು.
ಸಚಿವ ಶಿವಾನಂದ ಪಾಟೀಲ್ ರೈತ ಕುಲದ ಕ್ಷಮೆಯಾಚಿಸಬೇಕು:
ರೈತ ಸಮುದಾಯವನ್ನು ಅತ್ಯಂತ ಕೀಳಾಗಿ ಬಿಂಬಿಸಿ ಅವಹೇಳನ ಮಾಡಿರುವ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರ ಹೇಳಿಕೆ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆಯನ್ನು ಮಾಡುತ್ತಿದೆ. ಕೂಡಲೇ ಸಚಿವ ಶಿವಾನಂದ ಪಾಟೀಲ್ ರೈತ ಕುಲದ ಕ್ಷಮೆಯನ್ನಿ ಕೋರಿ ಮುಂದೆಂದೂ ಇಂತಹ ಅವಹೇಳನಕಾರಿ ಹೇಳಿಕೆಯನ್ನು ನೀಡುವುದಿಲ್ಲವೆಂದು ಸಾರ್ವಜನಿಕವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಮುಂಬರುವ ಫೆಬ್ರವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ 2024-25 ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಲಿದ್ದು, ಅದರಲ್ಲಿ ರೈತಪರ ಯೋಜನೆಗಳಿಗೆ ಪ್ರಥಮ ಆದ್ಯತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿದ್ಧಯ್ಯನ ಹುಂಡಿ ಸರ್ಕಲ್ ಬಳಿ ಮಧ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿರುವುದು ಖಂಡನೀಯ ಎಂದು ಹೇಳಿದರು.
ಮೈಸೂರು ತಾಲ್ಲೂಕು ಹುಯಿಲಾಳು ಬಳಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.
ಹುಯಿಲಾಳು ಬಳಿ 26 ಎಕರೆ ಪ್ರದೇಶದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಂಬಂಧ ಕ್ಯಾಬಿನೆಟ್ ಅನುಮತಿಯಷ್ಟೇ ಬಾಕಿ ಇದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಕ್ಯಾಬಿನೆಟ್ ಅನುಮತಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿರುವ ಕುರಿತ ಪ್ರಶ್ನೆಗ ಉತ್ತರಿಸಿದ ಬಡಗಲಪುರ ನಾಗೇಂದ್ರ, ರಾಜ್ಯ ಸರ್ಕಾರ ಕ್ಯಾಬಿನೆಟ್ ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಿದ್ದೇವೆ. ಒಂದು ವೇಳೆ ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ಜನರ ಕಷ್ಟ ಅರ್ಥ ಆಗುತ್ತಿಲ್ಲ, ನಮಗೆ ಹೆದ್ದಾರಿ ರಸ್ತೆಗಳಾಗಲಿ. ಏರೋಪ್ಲೇನ್ ಹಾರಾಟವಾಗಲಿ ಮತ್ತು ಕ್ರಿಕೆಟ್ ಸ್ಟೇಡಿಯಂ ಮುಖ್ಯ ಅಲ್ಲ, ಇವರು ಎಷ್ಟು ದಿನ ಸಂಸತ್ ಅಧಿವೇಶನದಲ್ಲಿ ರೈತರ ಎಂ.ಎಸ್.ಪಿ ಬೆಂಬಲ ಬೆಲೆಗೆ ಒತ್ತಾಯವಮಾಡಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಿ ಎಂದು ಒತ್ತಾಯ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಹುಯಿಲಾಳು ಬಳಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಆದರೆ ಅಲ್ಲಿನ ಪರಿಸರಕ್ಕೆ ಹಾನಿಯಾಗಲಿದೆ. ಪಕ್ಕದಲ್ಲಿ ಕೆರೆ ಇದೆ.ಅಲ್ಲಿ ಕೋಡಿ ಬಿದ್ದರೆ ಸ್ಟೇಡಿಯಂಗೆ ನೀರು ತುಂಬಿಕೊಳ್ಳಲಿದೆ. ಅಲ್ಲಿ ಸಾಕಷದಟು ಜಲಚರಗಳು ವಾಸಿಸುತ್ತವೆ.ಮತ್ತು ನೂರಾರು ಪಕ್ಷಿಗಳು ವಲಸೆ ಬಂದು ಸ್ವಂದವಾಗಿ ಹಾರಾಟ ನಡೆಸುತ್ತವೆ. ಸ್ಟೇಡಿಯಂ ನಿರ್ಮಾಣ ಮಾಡಿದರೆ ಅದಕ್ಕೆಲ್ಲಾ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.
ಈ ಎಲ್ಲಾ ವಿಚಾರಗಳನ್ನು ಮನಗಂಡು ಕರ್ನಾಟಕ ರಾಜ್ಯ ರೈತ ಸಂಘ ಆ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಡಾಎಚ್.ಸಿ.ಮಹದೇವಪ್ಪ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಹೇಳಿದರು.