ಚಾಮರಾಜನಗರ : ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರದಲ್ಲಿ ಹೋರಾಟದ 112 ನೇ ದಿನವೂ ಮುಂದುವರೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಟಮೋಟೊ ಹಿಡಿದುಕೊಂಡು ಕನ್ನಡ ಚಳವಳಿಗಾರರು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಚಳವಳಿಗಾರರು ಕೈಯಲ್ಲಿ ಟೊಮೊಟೋ ಹಿಡಿದುಕೊಂಡು, ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದು, ಇದನ್ನು ಅರಿಯದ ಕಾವೇರಿ ನಿರ್ವಹಣಾ ಸಮಿತಿಯು ಕರ್ನಾಟಕಕ್ಕೆ ಮಾರಕವಾದ ಸೂಚನೆಯನ್ನು ನೀಡುವ ಮೂಲಕ ತಮಿಳುನಾಡು ಸರ್ಕಾರವನ್ನು ಓಲೈಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಸಕಾಲದಲ್ಲಿ ಮಳೆಯಿಲ್ಲದೆ ರೈತರು ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿದ್ದು, ರೈತರ ಸಂಕಷ್ಟ ಹೆಚ್ಚಾಗಿದೆ ಪರಿಸ್ಥಿತಿ ಅರಿವಿದ್ದರೂ ಸಹ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಚಾ.ವೆಂ.ರಾಜಗೋಪಾಲ್. ಕುಮಾರ, ಪಣ್ಯದಹುಂಡಿ ರಾಜು ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಕೆಲ ಸಮಯ ವಾಹನ ಸಂಚಾರ ಬಂದ್ ಆಗಿದ್ದವು.