ದೆಹಲಿ : ಮಗನನ್ನು ಗೆಲ್ಲಿಸಲು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಷಡ್ಯಂತರ ರೂಪಿಸಿದ್ದಾರೆ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಆರೋಪಿಸಿದ್ದಾರೆ.
ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಮಗ ಲೋಕಸಭೆಗೆ ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಮಗನನ್ನು ಗೆಲ್ಲಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿ ಅರ್ಬನ್ ನಕ್ಸಲ್ಸ್ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅರ್ಬನ್ ನಕ್ಸಲರನ್ನು ಬೆಳೆಸುತ್ತಿದ್ದಾರೆ. ಸಂಸತ್ ನಲ್ಲಿ ಗಲಾಟೆಯಾದ 15 ನಿಮಿಷದಲ್ಲೇ ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದ್ದಾರೆ. ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದರು.
ಸಂಸತ್ ಅಧಿವೇಶನದ ವೇಳೆ ಇಬ್ಬರು ದುಷ್ಕರ್ಮಿಗಳು ಸದನದೊಳಗೆ ನುಗ್ಗಿ ಸ್ಮೋಕ್ ಬಾಂಬ್ ಎಸೆದಿದ್ದರು. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಸಂಸದರು ದುಷ್ಕರ್ಮಿಗಳನ್ನು ಹಿಡಿದು ಥಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ ಕಡೆಯಿಂದ ಪಾಸ್ ಸಿಕ್ಕಿರುವುದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿಪಕ್ಷ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಕರ್ನಾಟಕದ ಸಚಿವರು, ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಅಮಾನತುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.