ದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಇಳಿಕೆ ಕಂಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸುವ ಬಗ್ಗೆ ದೊಡ್ಡ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
2022ರಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದ್ದಾಗ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಹಾಗೂ ಡೀಸೆಲ್‌ಗೆ 35 ರೂ. ವರೆಗೂ ಭಾರೀ ನಷ್ಟ ಅನುಭವಿಸುತ್ತಿತ್ತು. ಆದರೆ ಬಳಿಕ ದರದಲ್ಲಿ ಭಾರೀ ಇಳಿಕೆಯಾಗಿದ್ದು, ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 7-10 ರೂ. ಹಾಗೂ ಡೀಸೆಲ್‌ಗೆ 3-4 ರೂ. ಲಾಭ ಮಾಡಿಕೊಳ್ಳುತ್ತಿದೆ. ಕಳೆದ 3 ತಿಂಗಳಲ್ಲಿ ಸುಮಾರು 28,000 ಕೋಟಿ ರೂ.ಯಷ್ಟು ಲಾಭ ಮಾಡಿಕೊಂಡಿದೆ.
ಇತ್ತ ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭ ತೈಲ ಬೆಲೆ ಇಳಿಕೆ ಮಾಡಿದರೆ ಹಣದುಬ್ಬರವನ್ನೂ ಹತೋಟಿಗೆ ತರಬಹುದು. ಹೀಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಶೀಘ್ರವೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಸಲು ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.